ಗೋಣಿಕೊಪ್ಪಲು, ಡಿ. 9: ಹುತ್ತರಿ ಹಬ್ಬಕ್ಕೆ ವಿಶೇಷವಾಗಿ ಬಳಸುವ ಹುತ್ತರಿ ಗೆಣಸಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದು ಗೋಣಿಕೊಪ್ಪ ಮಾರ್ಕೆಟ್‍ನಲ್ಲಿ ಹಬ್ಬಕ್ಕೆ ಇನ್ನು ಎರಡು ದಿನ ಇರುವಾಗಲೇ ನಾಲ್ಕರಿಂದ ಆರು ಟನ್‍ವರೆಗೆ ಹುತ್ತರಿ ಗೆಣಸು ಮಾರಾಟವಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ವಿಪರೀತವಾದ ಕಾರಣ ರೈತರು ಬೆಳೆದ ಹುತ್ತರಿ ಗೆಣಸಿನ ಬೆಳೆ ಕೈ ಹಿಡಿಯಲಿಲ್ಲ. ಈ ಕಾರಣದಿಂದ ದೂರದ ಸಾಲಿಗ್ರಾಮ, ಹನುಗೋಡು ಭಾಗದಿಂದ ರೈತರು ಬೆಳೆದ ಗುಣಮಟ್ಟದ ಗೆಣಸು ಮಾರುಕಟ್ಟೆಗೆ ಬಂದಿಳಿದಿವೆ.

ಹುತ್ತರಿ ಹಬ್ಬಕ್ಕೆ ವಿಶೇಷವಾಗಿ ಈ ಗೆಣಸನ್ನು ಬಳಸುವ ವಾಡಿಕೆ ಇರುವದರಿಂದ ಬೆಲೆ ಅಧಿಕವಿದ್ದರೂ ಹಬ್ಬ ಆಚರಣೆ ಮಾಡುವ ಕೊಡಗಿನ ಜನತೆ ಗೆಣಸನ್ನು ಖರೀದಿಸುವಲ್ಲಿ ಮುಂದಾಗಿದ್ದರು. ಹುತ್ತರಿ ಗೆಣಸಿನೊಂದಿಗೆ ಸಿಹಿ ಗೆಣಸು, ಪಚ್ಚೆಬಾಳೆಯು ಹೆಚ್ಚಾಗಿ ಮಾರುಕಟ್ಟೆಗೆ ಬಂದಿದ್ದು, ಮಾರಾಟವಾಗುತ್ತಿದೆ. ವ್ಯಾಪಾರವಿಲ್ಲದೆ ಕಷ್ಟದಲ್ಲಿದ್ದ ವ್ಯಾಪಾರಿಗಳು ಈ ಬಾರಿ ಹುತ್ತರಿ ಹಬ್ಬಕ್ಕೆ ದಿನ ಮುಂಚಿತವಾಗಿಯೇ ಗ್ರಾಹಕರು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವ್ಯಾಪಾರ ಮಾಡಿದ ಹಿನೆÀ್ನಲೆಯಲ್ಲಿ ಕೊಂಚ ಸಮಾಧಾನಪಟ್ಟಿದ್ದಾರೆ. ಅಲ್ಲದೆ ದಿನಸಿ ಅಂಗಡಿಗಳಲ್ಲಿ ತಂಬಿಟ್ಟು ಹುಡಿಗೆ ಬೇಡಿಕೆ ಹೆಚ್ಚಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ತಂಬಿಟ್ಟು ಹುಡಿ ಖರೀದಿಸುತ್ತಿದ್ದರು.

ಕಳೆದ ಎರಡು ದಿನಗಳಿಂದ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ. ಹುತ್ತರಿ ಗೆಣಸಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ಒಂದು ಕೆಜಿಗೆ 30 ರಿಂದ 40 ರೂಗಳವರೆಗೆ ಹುತ್ತರಿ ಗೆಣಸು ಮಾರಾಟ ಮಾಡಲಾಗುತ್ತಿದೆ. ಇನ್ನು ಎರಡು ದಿನ ಬಾಕಿ ಇರುವದರಿಂದ ವ್ಯಾಪಾರ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಇಲ್ಲಿನ ತರಕಾರಿ ವ್ಯಾಪಾರಿ ಅಸ್ಗರ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ವಿಶಿಷ್ಟ ಸ್ಥಾನಮಾನವಿದ್ದು, ಕೊಡಗಿನಲ್ಲಿ ಮುಂಗಾರು ಪ್ರಾರಂಭವಾಗುವ ಹಂತದಿಂದಲೇ ರೈತ ತಮ್ಮ ಗದ್ದೆಯಲ್ಲಿ ಉತ್ತು ಪೈರು ಬೆಳೆದು ನಾಟಿ ಕಾರ್ಯವನ್ನು ಮುಗಿಸುತ್ತಾರೆ. ಹೊಸ ಅಕ್ಕಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರವೇ ಈ ಹುತ್ತರಿ ಹಬ್ಬ.

ಹಬ್ಬದಲ್ಲಿ ವಿಶೇಷವಾಗಿ ಹೊಸ ಅಕ್ಕಿ ಪಾಯಸ, ತಂಬಿಟ್ಟು ಅವರವರ ಅನುಕೂಲಕ್ಕೆ ತಕ್ಕಂತೆ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಮಿತ್ರರೊಡಗೂಡಿ ಸೇವಿಸಿ ಸಂಭ್ರಮಿಸುತ್ತಾರೆ.

ಈ ಬಾರಿ ಕೊಡಗಿನಲ್ಲಿ ಹುತ್ತರಿ ಗೆಣಸು ಲಭ್ಯವಾಗದ ಕಾರಣ ದೂರದ ಜಿಲ್ಲೆಯಿಂದ ಹುತ್ತರಿ ಗೆಣಸನ್ನು ಮಾರುಕಟ್ಟೆಗೆ ತರಲಾಗಿದೆ. ಈಗಾಗಲೇ 5 ಟನ್‍ಗೂ ಅಧಿಕ ಗೆಣಸು ಮಾರಾಟವಾಗಿವೆ. ಗ್ರಾಹಕರು ಹೆಚ್ಚಾಗಿ ಹುತ್ತರಿ ಗೆಣಸು ಖರೀದಿಸಿದ್ದಾರೆ ಎಂದು ಇಲ್ಲಿನ ಸಗಟು ವ್ಯಾಪಾರಿ ಎಂ.ಆರ್. ರಫೀಕ್ ಹೇಳಿದರು.

-ಹೆಚ್.ಕೆ. ಜಗದೀಶ್