ಮಡಿಕೇರಿ, ಡಿ. 8: ಮಹಾ ಭಾರತದ ಸಮರಾಂಗಣದಲ್ಲಿ ಅರ್ಜುನನನ್ನು ಉದ್ದೇಶಿಸಿ ಶ್ರೀ ಕೃಷ್ಣ ಪರಮಾತ್ಮ ಬೋಧಿಸಿರುವ ಭಗವದ್ಗೀತೆಯು; ಎಲ್ಲಾ ಕಾಲಕ್ಕೂ ನಮ್ಮ ಸಮಾಜಕ್ಕೆ ಮಾರ್ಗದರ್ಶಕ ಗ್ರಂಥವಾಗಿದೆ ಎಂದು ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರು ಹಾಗೂ ಮಲ್ಲಿಕಾರ್ಜುನ ನಗರ ಕೋದಂಡರಾಮ ದೇವಾಲಯದ ವಿಶ್ವಸ್ತರಾದ ಜಿ. ರಾಜೇಂದ್ರ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಮಲ್ಲಿಕಾರ್ಜುನ ನಗರ ದೇವಾಲಯ ಸಮಿತಿ, ಜ್ಯೋತಿ ಯುವಕ ಸಂಘ ಹಾಗೂ ಶ್ರೀ ರಾಮ ಸೇವಾ ಸಮಿತಿಯಿಂದ ಆಯೋಜಿಸಿದ್ದ ಗೀತಾಜಯಂತಿ ಉತ್ಸವದಲ್ಲಿ ಅವರು ಉಪನ್ಯಾಸ ನೀಡುತ್ತಾ; ಅಮೃತದಂತೆ ಭಗವದ್ಗೀತೆಯು ಮಾತೃ ಸ್ವರೂಪದ್ದಾಗಿದೆ ಎಂದು ಬಣ್ಣಿಸಿದರು.
ನಶ್ವರ ಶರೀರ: ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿರುವಂತೆ ಮನುಷ್ಯ ಶರೀರ ನಶ್ವರವೆಂದು ಉಲ್ಲೇಖಿಸಿದ ಅವರು; ಆತ್ಮ ಶಾಶ್ವತವಾಗಿದ್ದು; ಪರಮಾತ್ಮನ ಅಂಶದಿಂದ ಕೂಡಿದ್ದಾಗಿದೆ ಎಂದು ಉಲ್ಲೇಖಿಸಿದರು. ಆತ್ಮವನ್ನು ಶಸ್ತ್ರ ಘಾಸಿಗೊಳಿಸದು, ಗಾಳಿ ಒಣಗಿಸದು, ಬೆಂಕಿ ಸುಡಲಾರದು, ನೀರು ನೆನೆಯಿಸಲಾರದು ಎಂಬದಾಗಿ ಗೀತೆಯಲ್ಲಿ ಭಗವಂತ ಹೇಳಿದ್ದನ್ನು ನೆನಪಿಸಿದರು.
ಭಕ್ತ ಕನಕದಾಸರು ವ್ಯಾಸರಾಯರ ಸಮ್ಮುಖ ಪಂಡಿತರ ನಡುವೆ; ಯಾರಾದರೂ ಸ್ವರ್ಗಕ್ಕೆ ಹೋಗುವಿರಾ? ಎಂಬ ಪ್ರಶ್ನೆಗೆ ‘ನಾನು’ ಹೋದರೆ ಹೋದೇನು ಎಂದು ಉತ್ತರಿಸಿದಂತೆ; ಪ್ರತಿಯೊಬ್ಬರ ಬದುಕಿನಲ್ಲಿ ನಾನು ಎಂಬ ಅಹಂಭಾವ ಬಿಟ್ಟು ಕೂಡಿ ಬಾಳುವದು ಕಲಿಯಬೇಕೆಂಬದು ಗೀತೆಯ ಸಾರವೆಂದು ನೆನಪಿಸಿದರು.
ಗೀತಾ ಅಭಿಯಾನ : ಸಿರಸಿಯ ಸೋಂದಾ ಸ್ವರ್ಣವಲ್ಲಿ ಸಂಸ್ಥಾನದಿಂದ ಭಗವದ್ಗೀಗೆ ಅಭಿಯಾನ ಕುರಿತು; ದೇವಾಲಯ ವಿಶ್ವಸ್ಥರು ಹಾಗೂ ಅಭಿಯಾನ ಸಂಯೋಜಕ ಎಸ್.ಎಸ್. ಸಂಪತ್‍ಕುಮಾರ್ ಅವರು ಇದೇ ಸಂದರ್ಭ ಮಾಹಿತಿ ನೀಡಿದರು. ಅರ್ಚಕ ನರಸಿಂಹಮೂರ್ತಿ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಜರುಗಿತು.
ಭಗವದ್ಗೀತೆ ಪಠನ : ಮಡಿಕೇರಿಯ ಶಿವಶಕ್ತಿ ಬಳಗದಿಂದ ಸಾಮೂಹಿಕವಾಗಿ ಭಗವದ್ಗೀತೆ ಪಠನ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ನೆರವೇರಿತು. ದೇವಾಲಯ ಸಮಿತಿ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ವಿಶ್ವನಾಥ್, ಗೋಪಿ, ಪರಮೇಶ್, ಚಂದ್ರ, ಕುಶ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ನೇತೃತ್ವದಲ್ಲಿ ಅಧಿಕ ಸಂಖ್ಯೆಯ ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ನಂಜುಂಡ ವಂದಿಸಿದರು.