ಕುಶಾಲನಗರ, ಡಿ. 8: ಅವಧಿ ಮೀರಿದ ಸಾಮಗ್ರಿಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಕುಶಾಲನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕುಶಾಲನಗರ ಗ್ರಾಹಕರ ವೇದಿಕೆಗೆ ದೂರು ನೀಡಿರುವ ಕುಶಾಲನಗರ ಪ.ಪಂ. ಮಾಜಿ ಸದಸ್ಯ ಎಂ. ನಂಜುಂಡಸ್ವಾಮಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಹಿತ ಮಾಹಿತಿ ನೀಡಿದ್ದು, ಕುಶಾಲನಗರ ಮುಖ್ಯರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್‍ವೊಂದರಲ್ಲಿ ತಾನು ಖರೀದಿಸಿದ ಕಾಲು ಕೆಜಿ ಪ್ರಮಾಣದ ಅಗಸೆ ಬೀಜಕ್ಕೆ 88 ರೂ.ಗಳನ್ನು ಪಡೆದಿದ್ದು ಇದೇ ಪ್ರಮಾಣದ ಸಾಮಗ್ರಿಗೆ ನವೆಂಬರ್ ತಿಂಗಳಲ್ಲಿ ರೂ.44ಗಳ ದರ ನಿಗದಿಪಡಿಸಲಾಗಿತ್ತು.
ಈ ಬಗ್ಗೆ ವಿಚಾರಿಸಿದಾಗ ಅಚಾತುರ್ಯದಿಂದ ತಪ್ಪು ಉಂಟಾಗಿದೆ ಎಂದು ಅಂಗಡಿ ಮಾಲೀಕರು ಒಪ್ಪಿಕೊಂಡಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಾರಾಟ ವಸ್ತುವಿನ ಪ್ಯಾಕೆಟ್ ಮೇಲೆ ಸರಕಾರಿ ನಿಯಮ ಪ್ರಕಾರ ಯಾವದೇ ರೀತಿಯ ದಾಖಲೆಗಳು ಕಂಡುಬರುತ್ತಿಲ್ಲ. ಆಹಾರ ಇಲಾಖೆಯಿಂದ ಪಡೆಯಬೇಕಾದ ಅನುಮತಿ ಸಂಖ್ಯೆ ಇಲ್ಲ. ಜಿಎಸ್‍ಟಿ ಸಂಖ್ಯೆ ಇಲ್ಲ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿರುವ ಇಂತಹ ಅಂಗಡಿಗಳ ಪರವಾನಗಿ ರದ್ದುಪಡಿಸುವದರದೊಂದಿಗೆ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಎ.ಎ.ಚಂಗಪ್ಪ ಈ ಸಂದರ್ಭ ತಿಳಿಸಿದರು.
ಕೆಲವು ಅಂಗಡಿ ಮಳಿಗೆಗಳಲ್ಲಿ ಸ್ಥಳೀಯವಾಗಿ ಆಹಾರ ಸಾಮಗ್ರಿಗಳನ್ನು ಪೊಟ್ಟಣ ಮಾಡಿ ತಮಗೆ ಇಚ್ಚೆ ಬಂದ ದರಕ್ಕೆ ಮಾರಾಟ ಮಾಡುತ್ತಿದ್ದು; ಗುಣಮಟ್ಟ ಕಾಯ್ದುಕೊಳ್ಳದಿರುವ ಬಗ್ಗೆ ತಕ್ಷಣ ಆಹಾರ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ವೇದಿಕೆಯ ಪ್ರಮುಖರಾದ ಗಿರೀಶ್ ಆಗ್ರಹಿಸಿದ್ದಾರೆ.