ಮಡಿಕೇರಿ, ಡಿ. 8: ಮಡಿಕೇರಿಯ ಕಾವೇರಿ ಕಲಾಕ್ಷೇತ್ರವನ್ನು ರೂ. ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲು ಸರಕಾರದ ವಿಶೇಷ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ. ಆ ಮುಖಾಂತರ ಕಾವೇರಿ ಕಲಾ ಕ್ಷೇತ್ರದ ಕಟ್ಟಡವನ್ನು ದುರಸ್ತಿಗೊಳಿಸಿ, ಮೇಲ್ಚಾವಣಿ, ನೆಲ ಸೇರಿದಂತೆ ಸಂಪೂರ್ಣ ನವೀಕರಿಸಲಾಗುವದು ಎಂದು ಪೌರಾಯುಕ್ತ ಎಂ.ಎಲ್. ರಮೇಶ್ ತಿಳಿಸಿದ್ದಾರೆ.ಯೋಜನೆಯ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಶಿಥಿಲಗೊಂಡಿರುವ ಕಟ್ಟಡಕ್ಕೆ ಕಾಯಕಲ್ಪ ನೀಡುವ ದಿಸೆಯಲ್ಲಿ ಲೋಕೋಪಯೋಗಿ ಅಧಿಕಾರಿಗಳ ತಾಂತ್ರಿಕ ಸಲಹೆ ಕೋರಲಾಗಿದೆ ಎಂದರು.ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು, ಸಭೆ-ಸಮಾರಂಭಗಳನ್ನು ಆಯೋಜಿಸುವ ದಿಸೆಯಲ್ಲಿ ಸಂಪೂರ್ಣ ಕಟ್ಟಡವನ್ನು ನವೀಕರಿಸಿ, ಹೊಸ ಆಸನಗಳೊಂದಿಗೆ ಸುಸಜ್ಜಿತ ವೇದಿಕೆಯ ನಿರ್ಮಾಣಕ್ಕೆ ಗಮನ ಹರಿಸಲಾಗುವದು ಎಂದು ವಿವರಿಸಿದರು.ಈ ದಿಸೆಯಲ್ಲಿ ಕರ್ನಾಟಕ ಸರಕಾರದಿಂದ ರೂ. ಒಂದು ಕೋಟಿ ವಿಶೇಷ ಅನುದಾನದೊಂದಿಗೆ ಕ್ರಿಯಾಯೋಜನೆ ರೂಪಿಸಲಾಗಿದ್ದು, ಸದ್ಯವೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವದು ಎಂದು ರಮೇಶ್ ಮಾಹಿತಿ ನೀಡಿದರು.ನೀರಿನ ಘಟಕ: ಅಲ್ಲದೆ ಸರಕಾರದ ವಿಶೇಷ ಅನುದಾನದಲ್ಲಿ ಮಡಿಕೇರಿಯ ಮಹದೇವಪೇಟೆ ಹಾಗೂ ಹೊಸ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ಬಳಿಯಲ್ಲಿ ತಲಾ ರೂ. 10 ಲಕ್ಷ ಮೊತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕ್ರಮ ತೆಗೆದುಕೊಂಡಿದ್ದು, ಬಸ್ ಪ್ರಯಾಣಿಕರ ಸಹಿತ ಸಾರ್ವಜನಿಕರಿಗೆ ಈ ಯೋಜನೆಯಿಂದ ಶುದ್ಧ ನೀರು ಲಭಿಸಲಿದೆ ಎಂದರು.

ವಿವಿಧೆಡೆ ನೀರಿನ ಸೌಲಭ್ಯ: ಅಲ್ಲದೆ ರೂ. 44 ಲಕ್ಷ ವೆಚ್ಚದಲ್ಲಿ ನಗರದ ವಾರ್ಡ್ ನಂ. 13ರ ಡೈರಿ ಫಾರಂ, ರಿಮ್ಯಾಂಡ್ ಹೋಂ, ಚೈನ್‍ಗೇಟ್ ಪೊಲೀಸ್ ವಸತಿ, ಜಲಾಶ್ರಯ ಬಡಾವಣೆ, ಚಾಮುಂಡೇಶ್ವರಿ ನಗರ, ರೇಸ್ ಕೋರ್ಸ್ ರಸ್ತೆ ಮುಂತಾದ ಜನವಸತಿಗಳಿಗೆ ಕುಡಿಯುವ ನೀರಿನ ಪೂರೈಕೆ ರೂಪಿಸಲಾಗುವದು ಎಂದು ಕಾಮಗಾರಿ ವಿವರ ನೀಡಿದರು.

ದೀಪದ ವ್ಯವಸ್ಥೆ: ನಗರದ ಜಿಲ್ಲಾ ಕ್ರೀಡಾಂಗಣ ಬಳಿ ರೂ. 10 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್ ಬೀದಿ ದೀಪ ಹಾಗೂ ಹೊಸ ಬಸ್ ನಿಲ್ದಾಣದಿಂದ ಕೈಗಾರಿಕಾ ಬಡಾವಣೆ ಹಾಗೂ ಕೊಹಿನೂರು ರಸ್ತೆ ತನಕ ‘ಆಕ್ಟ ಗೋನಲ್‍ಪೋಲ್’ ಅಳವಡಿಸಿ ಬೀದಿ ದೀಪ ಕಲ್ಪಿಸಲು ರೂ. 8 ಲಕ್ಷದ ಯೋಜನೆ ರೂಪಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಅಲ್ಲದೆ ರೂ. 20 ಲಕ್ಷ ಮೊತ್ತದಲ್ಲಿ ರೇಸ್ ಕೋರ್ಸ್ ರಸ್ತೆ, ಕಾಲೇಜು ರಸ್ತೆ, ವಿಜಯ ವಿನಾಯಕ ದೇವಾಲಯ ತನಕ ಆಕ್ಟಗೋನಲ್ ಪೋಲ್ ಅಳವಡಿಸಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮವಹಿಸುವ ದಾಗಿಯೂ ಪೌರಾಯುಕ್ತ ರಮೇಶ್ ತಿಳಿಸಿದರು. ಈ ರೀತಿಯಾಗಿ ನಗರಸಭೆ ಯಿಂದ ಸರಕಾರದ ವಿಶೇಷ ಅನುದಾನ ರೂ. 4 ಕೋಟಿ ವೆಚ್ಚದಿಂದ ಕಾಮಗಾರಿಗೆ ಕ್ರಿಯಾ ಯೋಜನೆ ಕೈಗೊಂಡಿದ್ದು, ಮುಂದೆ ಕೆಲಸ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.