ಕುಶಾಲನಗರ, ಡಿ. 8: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ಆರೋಪಿಗಳು ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಆಂಧ್ರಪ್ರದೇಶದ ಕಡೆಗೆ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಅಪರಾಧ ಪತ್ತೆ ದಳ ಕುಶಾಲನಗರದ ಆನೆ ಕಾಡು ಬಳಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದೆ. ಕೇರಳ ಕಾಸರಗೋಡು ಜಿಲ್ಲೆಯ ಚಂಗಲ ಗ್ರಾಮದ ಶರೀಫ್ ಮತ್ತು ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು.ಶ್ರೀಗಂಧ ತುಂಡುಗಳನ್ನು ಸಂಗ್ರಹಿಸಿ ಆಂಧ್ರಪ್ರದೇಶದ ಶ್ರೀಗಂಧದ ಎಣ್ಣೆ ತೆಗೆಯುವ ಫ್ಯಾಕ್ಟರಿಗೆ ಮಾರಾಟ ಮಾಡುವದನ್ನು ರೂಡಿ ಮಾಡಿಕೊಂಡಿದ್ದರೆಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿ ಗಳಿಂದ ಒಟ್ಟು 10 ಚೀಲದಲ್ಲಿದ್ದ 175 ಕೆಜಿ ಶ್ರೀಗಂಧ ತುಂಡುಗಳನ್ನು, ಎರಡು ಚಿಕ್ಕ ಡಿಜಿಟಲ್ ಸ್ಕೇಲ್ ಹಾಗೂ ಆಂಧ್ರ ಪ್ರದೇಶ ರಾಜ್ಯದ, ಮಹಿಂದ್ರ ವೆರಿಟೊ ವಾಹನ (ಂP02 ಂಙ0181)ವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲಿನ ಒಟ್ಟು ಮೌಲ್ಯ ಸುಮಾರು ರೂ.9 ಲಕ್ಷಗಳು ಎಂದು ಅಂದಾಜಿಸಲಾಗಿದೆ. ವಾಹನ ಪರಿಶೀಲನೆ ವೇಳೆ ಆರೋಪಿಗಳು ಕಾರಿನ ಹಿಂಬದಿಯ ಸೀಟಿನ ಹಿಂದೆ ಯಾರಿಗೂ ಕಾಣದ ರೀತಿಯಲ್ಲಿ ಶ್ರೀಗಂಧ ತುಂಡುಗಳನ್ನು ಶೇಖರಣೆ ಮಾಡುವ ಒಂದು ಡಬ್ಬವನ್ನು ನಿರ್ಮಿಸಿದ್ದುದು ಕಂಡು ಬಂದಿದೆ.
ಎಸ್ಪಿ ಡಾ. ಸುಮನ್ ಡಿಪಿ, ಡಿವೈಎಸ್ಪಿ ಪಿ.ಕೆ. ಮುರಳೀಧರ ಇವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಎನ್.ಮಹೇಶ್ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ಹಮೀದ್, ಯೋಗೇಶ್ ಕುಮಾರ್, ವೆಂಕಟೇಶ್, ಅನಿಲ್ ಕುಮಾರ್, ವಸಂತ, ಕುಶಾಲನಗರ ವೃತ್ತದ ಅಪರಾಧ ದಳದ ಸಿಬ್ಬಂದಿ ಗಳಾದ ಜೋಸೆಫ್, ಪ್ರಕಾಶ್, ಸಜಿ, ಸಂದೇಶ್ ಭಾಗವಹಿಸಿದ್ದರು.
ಈ ಕಾರ್ಯಾಚರಣೆಯನ್ನು ಪ್ರಶಂಸಿಸಿ ಎಸ್ಪಿಯವರು ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.