ಮಡಿಕೇರಿ, ಡಿ. 8: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಂತೆ, ಇಲ್ಲಿನ ರಾಜಗದ್ದುಗೆ ಸೇರಿದಂತೆ ಇತರ ಏಳು ದೇವಾಲಯಗಳಿದ್ದು, ಇಂತಹ ಸನ್ನಿಧಿಗಳ ಉಸ್ತುವಾರಿಗಾಗಿ ಸರಕಾರದಿಂದ ಧಾರ್ಮಿಕ ಪರಿಷತ್ತು ರಚಿಸಿ ಎರಡು ವರ್ಷವೇ ಕಳೆದು ಹೋಗಿದೆ. ಹೀಗಿದ್ದು ಪರಿಷತ್ತಿನ ಚಟುವಟಿಕೆ ಅಥವಾ ಅಸ್ತಿತ್ವ ತಿಳಿಯ ದಾಗಿದೆ. ಪರಿಣಾಮ ಸಂಬಂಧಿಸಿದ ಇಲಾಖೆಗೆ ಒಳಪಟ್ಟಿರುವ ಮೂರು ದೇವಾಲಯಗಳು ಹಾಗೂ ರಾಜರ ಗದ್ದುಗೆ ಧಾರ್ಮಿಕ ಕೈಂಕರ್ಯಗಳಿಂದ ಕಡೆಗಣನೆಯಾಗುತ್ತಿದೆ ಎಂದು ಆರೋಪವಿದೆ.ಸರಕಾರದ ಮಾನದಂಡದಂತೆ ರೂ. 25 ಲಕ್ಷಕ್ಕಿಂತಲೂ ಅಧಿಕ ಆದಾಯವಿರುವ ದೇವಾಲಯಗಳನ್ನು ‘ಎ’ ಗ್ರೇಡ್ ಎಂದು ಪರಿಗಣಿಸಲಾ ಗಿದೆ. ಆ ಪಟ್ಟಿಯಲ್ಲಿ ಕೊಡಗಿನ ಪ್ರಮುಖ ತೀರ್ಥ ಕ್ಷೇತ್ರಗಳಾದ ತಲಕಾವೇರಿ ಹಾಗೂ ಭಾಗಮಂಡಲ ದೇವಾಲಯಗಳು, ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿ ಹಾಗೂ ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯ ಗಳಿದ್ದು, ಇಲ್ಲಿ ಈಗಾಗಲೇ ವ್ಯವಸ್ಥಾಪನಾ ಸಮಿತಿಗಳು ಉಸ್ತುವಾರಿ ನೋಡಿಕೊಳ್ಳುತ್ತಿವೆ.

ಅಂತೆಯೇ ಜಿಲ್ಲೆಯಲ್ಲಿ ರೂ. 25 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ರೂ. 5 ಲಕ್ಷಕ್ಕಿಂತ ಆದಾಯ ಜಾಸ್ತಿಯಿರುವ ‘ಬಿ’ ಶ್ರೇಣಿಯ ದೇಗುಲಗಳಿಲ್ಲ; ಬದಲಾಗಿ ರೂ. 5 ಲಕ್ಷಕ್ಕಿಂತ ಕಡಿಮೆ ವರಮಾನವಿರುವ ‘ಸಿ’ ಗ್ರೇಡ್‍ನ ಮೂರು ದೇವಾಲಯಗಳಿವೆ.‘ಸಿ’ ಗ್ರೇಡ್: ಈ ‘ಸಿ’ ಗ್ರೇಡ್‍ನಲ್ಲಿ ಪಾಲೂರು ಶ್ರೀ ಮಹಾಲಿಂಗೇಶ್ವರ, ಅಲ್ಲಿನ ಹರಿಶ್ಚಂದ್ರ ಗ್ರಾಮದ ಶ್ರೀ ಅಗಸ್ತ್ಯೇಶ್ವರ ಹಾಗೂ ಇರ್ಪು ಶ್ರೀ ರಾಮೇಶ್ವರ ದೇವಾಲಯಗಳೊಂದಿಗೆ, ನಗರದ ರಾಜರ ಗದ್ದುಗೆ ಸೇರ್ಪಡೆಗೊಂಡಿವೆ. ಸಾಮಾನ್ಯವಾಗಿ ಇಂತಹ ದೇವಾಲಯಗಳಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಧಾರ್ಮಿಕ ಪರಿಷತ್ತು ಸಮಿತಿಗಳನ್ನು ರಚಿಸಬೇಕಿದೆ.

ಸರಕಾರದ ಆದೇಶ: ಈ ನಿಯಮಗಳನ್ನು ಜಾರಿಗೊಳಿಸಿ ಕರ್ನಾಟಕ ಸರಕಾರವು 2017ರ ಸೆಪ್ಟೆಂಬರ್ 27 ರಂದು ಅಧಿಕೃತ ಆದೇಶ ಹೊರಡಿಸುವದರೊಂದಿಗೆ ಕೊಡಗು ಜಿಲ್ಲೆಯ ಧಾರ್ಮಿಕ ಪರಿಷತ್ತು ರಚಿಸಿದೆ. ಕೊಡಗು ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಪರಿಷತ್ತಿನಲ್ಲಿ ಮುಜರಾಯಿ ತಹಶೀಲ್ದಾರ್ ಕಾರ್ಯ ದರ್ಶಿಯಾಗಿದ್ದು, ಸದಸ್ಯರುಗಳಾಗಿ 9 ಮಂದಿ ನಿಯುಕ್ತಿಗೊಂಡಿದ್ದಾರೆ.

ಈ ಸಮಿತಿಯು ಕೊಡಗಿನಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ‘ಎ’ ಗ್ರೇಡ್‍ನ ದೇವಾಲಯಗಳ ಚಟುವಟಿಕೆ ಸಂಬಂಧ ಕಾಲಕಾಲಕ್ಕೆ ಮಾರ್ಗದರ್ಶನ ನೀಡುವದರೊಂದಿಗೆ ‘ಸಿ’ ಗ್ರೇಡ್ ದೇವಾಲಯಗಳಿಗೆ ಮೇಲುಸ್ತುವಾರಿ ಸಮಿತಿ ರಚಿಸಿ, ಅಗತ್ಯ ಮಾರ್ಗದರ್ಶನ ನೀಡಬೇಕಿದೆ. ಈ ಧಾರ್ಮಿಕ ಪರಿಷತ್ತಿನ ಸದಸ್ಯರ ಪ್ರಕಾರ ಕೇವಲ ಸರಕಾರದ ಆದೇಶ ಹೊರತುಪಡಿಸಿ ಯಾವದೇ ಚಟುವಟಿಕೆ; ಈ ಎರಡು ವರ್ಷಗಳಲ್ಲಿ ನಡೆದಿಲ್ಲ.

ಹೀಗಾಗಿ ಪಾಲೂರು, ಇರ್ಪು, ಹರಿಶ್ಚಂದ್ರ ದೇವಾಲಯಗಳು ಹಾಗೂ ಗದ್ದುಗೆಯಲ್ಲಿ ಪೂಜಾ ಕ್ರಮಗಳನ್ನು ನಿರ್ವಹಿಸಲು ಮತ್ತು ಆಯಾ ದೇವಾಲಯಗಳ ಅಭಿವೃದ್ಧಿಗೆ ಯಾರೂ ಕಾಳಜಿ ತೋರುತ್ತಿಲ್ಲ.

ಸದಸ್ಯರಲ್ಲಿ ಗೊಂದಲ: ಈ ಪರಿಷತ್ತಿನಲ್ಲಿ ಇಬ್ಬರು ಅಧಿಕಾರಿ ಗಳಲ್ಲದೆ, ಕೊಡಗು ಮೂಲದ ಬೆಂಗಳೂರಿನ ನಿವೃತ್ತ ನ್ಯಾಯಾಧೀಶ ರಾದ ಕನ್ನಂಡ ಪೊನ್ನಪ್ಪ, ಸ್ಥಳೀಯರಾದ ಕೃಷ್ಣ ಉಪಾಧ್ಯಾಯ, ಕೆ. ವೆಂಕಟೇಶ್, ಗೋಣಿಕೊಪ್ಪಲುವಿನ ಎಸ್. ಪದ್ಮಿನಿ, ಬಿಳುಗುಂದ ಗ್ರಾಮದ ಸಿ. ಕಾವೇರಿಯಪ್ಪ, ತಾಳತ್‍ಮನೆಯ ಬಿ. ಸದಾನಂದ ಬಂಗೇರ, ಶಿರಂಗಾಲ ಗ್ರಾಮದ ಬೇಲೂರಯ್ಯ ಇದ್ದಾರೆ. ಅಂತೆಯೇ ಇನ್ನೋರ್ವ ಸದಸ್ಯ ಆರ್.ಎಲ್. ಕಾಶಿಪತಿ ಈಗಾಗಲೇ ಮೃತರಾಗಿದ್ದಾರೆ.

ಪರಿಣಾಮ ಕೊಡಗು ಧಾರ್ಮಿಕ ಪರಿಷತ್ ಅಸ್ತಿತ್ವದಲ್ಲಿ ಇದೆಯೇ ಅಥವಾ ಇಲ್ಲವೇ; ಇದ್ದರೆ ತಮ್ಮ ಕಾರ್ಯವ್ಯಾಪ್ತಿ ಏನು? ಎಂಬಿತ್ಯಾದಿ ಗೊಂದಲದಲ್ಲಿ ಸದಸ್ಯರಿದ್ದಾರೆ. ಇನ್ನೊಂದೆಡೆ ‘ಸಿ’ ಗ್ರೇಡ್ ದೇವಾಲಯ ಗಳ ನಿರ್ವಹಣೆ ಸಂಬಂಧ ಆಯ ಗ್ರಾಮಸ್ಥರು ಅಸಹಾಯಕರಾಗಿದ್ದು, ಸಂಬಳ ಇತ್ಯಾದಿ ನಿರ್ವಹಣೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿ ಕಾಳಜಿ ವಹಿಸಬೇಕಿದೆ.