ಮಡಿಕೇರಿ, ಡಿ. 7: ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೀರನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ತಾ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್ ನಡೆಸುವದಾಗಿ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಳೆಗಾಲ ಕಳೆದು ಬಿಸಿಲಿನ ವಾತಾವರಣ ಮೂಡಿದ್ದರೂ ರಸ್ತೆ ದುರಸ್ತಿಯ ಬಗ್ಗೆ ನಗರಸಭೆ ಕಾಳಜಿ ತೋರುತ್ತಿಲ್ಲ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆಹಾನಿಯಿಂದ ಬೇಸತ್ತು ಹೋಗಿರುವ ಮಡಿಕೇರಿ ಜನತೆ ಇದೀಗ ಹದಗೆಟ್ಟ ರಸ್ತೆಯಿಂದಾಗಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿರಂತರ ಮಳೆಯ ನೆಪವೊಡ್ಡುತ್ತಾ ಬಂದಿರುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಲ್ಲೂ ಕಾಮಗಾರಿ ಆರಂಭಿಸುವ ಲಕ್ಷಣ ಕಾಣುತ್ತಿಲ್ಲ. ನಗರದ ಹೃದಯ ಭಾಗದ ಮಂಗೇರಿರ ಮುತ್ತಣ್ಣ ವೃತ್ತದ ಬಳಿ ರಸ್ತೆ ಸಂಪೂರ್ಣವಾಗಿ ಹಳ್ಳಕೊಳ್ಳಗಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.