ಸುಂಟಿಕೊಪ್ಪ, ಡಿ. 7: ಕೃಷಿಕರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡುವದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮ ಇಳುವರಿಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಸುಂಟಿಕೊಪ್ಪ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ.ಹೆಚ್ ಮನಸ್ವಿ ಹೇಳಿದರು.
ಸುಂಟಿಕೊಪ್ಪ ರೈತ ಸಂಪರ್ಕ ಕೇಂದ್ರದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಅಂಗವಾಗಿ ಕೃಷಿಕರಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ದೇಶ 50 ಮಿಲಿಯನ್ಟನ್ ಆಹಾರ ಉತ್ಪಾದನೆ ಮಾಡಲಾಗುತ್ತಿತ್ತು ಆಗ ಆಹಾರದ ಕೊರತೆಯಿಂದ ಆಮೇರಿಕಾ ದೇಶದಿಂದ ಆಹಾರ ಪದಾರ್ಥ ಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೆವು ಪ್ರಸ್ತುತ ನಮ್ಮ ದೇಶ 285 ಮಿಲಿಯನ್ಟನ್ ಆಹಾರ ಉತ್ಪಾದಿ ಸುತ್ತಿದ್ದು, ವಿದೇಶಗಳಿಗೆ ರಪ್ತು ಮಾಡುತ್ತಿದ್ದೇವೆ, ರಸಗೊಬ್ಬರಕ್ಕಿಂತ ಕೊಟ್ಟಿಗೆ ಗೊಬ್ಬರದಿಂದ ರೈತರು ಕೃಷಿ ಇಳುವರಿಯನ್ನು ಹೆಚ್ಚಿಸಬಹುದು ಲಘು ಪೋಷಕಾಂಶದಿಂದ ಮಣ್ಣಿನ ಫಲವತತ್ತೆ ಸುಸ್ಥಿರಗೊಳಿಸಲು ಸಾಧ್ಯವಿದೆ ಎಂದು ಹೇಳಿದರು. ಸುಂಟಿಕೊಪ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಮಾತನಾಡಿ ರೈತರು ಹಿರಿಯರು ಬೆಳಸಿಕೊಂಡು ಬಂದ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ವಿಮುಖರಾಗಿ ಆಧುನಿಕ ಕೃಷಿಗೆ ಒಗ್ಗಿಕೊಂಡು ಕ್ರಿಮಿನಾಶ ರಸಗೊಬ್ಬರ ಬಳಕೆ ಮಾಡುತ್ತಿರುವದು ಸದ್ಯಕ್ಕೆ ಅಲ್ಪಮಟ್ಟಿಗೆ ಫಲ ಲಭಿಸಿದರೂ ಮುಂದಿನ ಪೀಳಿಗೆಯ ಕೃಷಿಕರಿಗೆ ಇದರಿಂದ ಗಂಡಾಂತರ ತಪ್ಪಿದಲ್ಲಿ ಈ ಬಗ್ಗೆ ಈಗಲೇ ಎಚ್ಚೆತುಕೊಳ್ಳಬೇಕು ಪ್ಲಾಸ್ಟಿಕ್ ಚೀಲವನ್ನು ತೋಟದಲ್ಲಿ ಸುಡುವದು ಸರಿಯಲ್ಲ ಇದು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಪ್ಲಾಸ್ಟಿಕ್ ಅನ್ನು ಗ್ರಾ.ಪಂ. ಕಸತೊಟ್ಟಿಗೆ ತಂದು ಹಾಕಬೇಕೆಂದು ಹೇಳಿದರು.
ಕೃಷಿ ಸಹಾಯಕ ತಾಂತ್ರಿಕ ಅಧಿಕಾರಿ ಸುಪರ್ಣ ಮಾತನಾಡಿ, ಕೃಷಿ ಸಾವಯವ ಎರೆಹುಳ ಗೊಬ್ಬರದಿಂದ ರೈತರು ಮಣ್ಣಿನ ಫಲವತತ್ತೆ ಕಾಪಾಡಿಕೊಂಡು ಉತ್ತಮ ಇಳುವರಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ ರೋಸ್ಮೇರಿ ರಾಡ್ರಿಗಸ್ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗರ್ವಾಲೆ, ಗ್ರಾ.ಪಂ. ಉಪಾಧ್ಯಕ್ಷ ಪಳಂಗಪ್ಪ ವೇದಿಕೆಯಲ್ಲಿ ಉಪಸ್ಥಿತ ರಿದ್ದರು. ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.