ಮಡಿಕೇರಿ, ಡಿ. 6: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತೀರಾ ಹದಗೆಟ್ಟಿರುವ ರಸ್ತೆಗಳನ್ನು; ಮುಂದಿನ ಫೆಬ್ರವರಿ ಅಂತ್ಯದೊಳಗೆ ಸರಿಪಡಿಸು ವಂತೆ; ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ನಗರದ ವಿವಿಧ ಬಡಾವಣೆ ಗಳಲ್ಲಿ ದಿಢೀರ್ ಸಂಚರಿಸಿದ ಅವರಿಬ್ಬರು; ಸ್ಥಳದಲ್ಲಿದ್ದ ಪೌರಾಯುಕ್ತ ಎಂ.ಎಲ್. ರಮೇಶ್ ಅವರಿಗೆ ಕಾಮಗಾರಿ ಬಗ್ಗೆ ತುರ್ತು ಗಮನ ಹರಿಸುವಂತೆ ಹೇಳಿದರು.ನಗರದಲ್ಲಿ ನಿತ್ಯ ವಾಹನಗಳ ಚಾಲಕರು, ಸಾರ್ವಜಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ದೂರುಗಳ ಬಗ್ಗೆ ಪ್ರಸ್ತಾಪಿಸಿದ ಶಾಸಕರುಗಳು; ಅಧಿಕಾರಿ ಗಳು ಜವಾಬ್ದಾರಿಯಿಂದ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸ ದಿದ್ದರೆ ಸರಕಾರದಿಂದ ಕಾನೂನು ಕ್ರಮಕ್ಕೆ ಕೋರುವದಾಗಿ ಎಚ್ಚರಿಸಿದರು.ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಮುಂಭಾಗದ ರಸ್ತೆ, ಮುತ್ತಪ್ಪ ದೇವಾಲಯ ರಸ್ತೆ, ನೂತನ ಬಸ್ ನಿಲ್ದಾಣ, ಪೊಲೀಸ್ ವಸತಿ ಸಂಕೀರ್ಣ, ಹೊಸ ಬಡಾವಣೆ, ಗೌಳಿ ಬೀದಿ ಮುಂತಾದೆಡೆಗಳಲ್ಲಿ ರಸ್ತೆಗಳ ಅವ್ಯವಸ್ಥೆ ಪರಿಶೀಲಿಸಿದ ಶಾಸಕರು ಗಳು; ಈ ಸಂಬಂಧ ಕ್ರಿಯಾ ಯೋಜನೆಯ ಮಾಹಿತಿ ಪಡೆದರು.

ರೂ. 29 ಕೋಟಿ ಕೆಲಸ : ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚುರಂಜನ್, ಇದುವರೆಗೆ ಮಳೆಯ ಕಾರಣಕ್ಕಾಗಿ ಕೆಲಸ ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದು; ಈಗ ಬಿಸಿಲು

ಇರುವ ಹಿನ್ನೆಲೆ ಅಗತ್ಯವಾಗಿ ಕಾಮಗಾರಿಯನ್ನು

(ಮೊದಲ ಪುಟದಿಂದ) ತುರ್ತು ಆರಂಭಿಸಬೇಕೆಂದು ತಾಕೀತು ಮಾಡಿದರು. ಈ ಸಂಬಂಧ ರೂ. 29 ಕೋಟಿ ಅನುದಾನವಿದ್ದು; ಅಗತ್ಯಬಿದ್ದರೆ ಸರಕಾರದಿಂದ ಹೆಚ್ಚಿನ ಅನುದಾನ ಪಡೆಯುವ ಇಂಗಿತ ವ್ಯಕ್ತಪಡಿಸಿದರು.

ಅಧಿಕಾರಿಗಳು ತರಾಟೆಗೆ : ನಗರ ಸಭೆಯಿಂದ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದ ಶಾಸಕರು; ಕಸ ಬೇರ್ಪಡಿಸಿ ನೀಡದ ಸಾರ್ವಜನಿಕರು, ಹೊಟೇಲ್ ಮಾಲೀಕರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ನಿಶಾನಿ ಬೆಟ್ಟದಲ್ಲಿ ಕಸ ವಿಲೇವಾರಿ ಘಟಕವನ್ನು ಖುದ್ದು ವೀಕ್ಷಿಸಿ; ಕಸ ಪರಿಷ್ಕರಣ ಘಟಕದ ಯಂತ್ರ ಕೆಟ್ಟು ನಿಂತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿತ್ಯ 30 ಟನ್ ಕಸ : ಈ ವೇಳೆ ಅಸಹಾಯಕತೆ ತೋಡಿಕೊಂಡ ಅಧಿಕಾರಿಗಳು; ಪ್ರತಿನಿತ್ಯ 30 ಟನ್ ಕಸ ಸಂಗ್ರಹವಾಗುತ್ತಿದ್ದು; ಹಸಿ ಕಸದಿಂದ ಗೊಬ್ಬರ ತಯಾರಿಸುತ್ತಿರುವದಾಗಿಯೂ; ಒಣಕಸವನ್ನು ಸುಮಾರು 3 ಟನ್‍ನಷ್ಟು ಮೈಸೂರಿನ ಕಾರ್ಖಾನೆಗೆ ಒದಗಿಸಲಾಗಿದೆ ಎಂದು ವಿವರಿಸಿದರು. ಈ ಕಸದಿಂದ ಕಾರ್ಖಾನೆಯನ್ನು ‘ಇಂಟರ್ ಲಾಕ್’ ಬಳಕೆಗೆ ಉಪಯೋಗಿಸುತ್ತಿರುವದಾಗಿ ಮಾಹಿತಿ ನೀಡಿದರು.

ಮುಕ್ತಿ ಕಾಣಿಸಿ : ಇಡೀ ಮಡಿಕೇರಿ ಕಾಣುವ ಸುಂದರ ತಾಣವಿಂದು ಕಸದ ಕೊಂಬೆಯಾಗಿರುವದು ನೋವಿನ ವಿಚಾರವೆಂದು ಈ ವೇಳೆ ಪ್ರತಿಕ್ರಿಯಿಸಿದ ಅಪ್ಪಚ್ಚುರಂಜನ್, ಆದಷ್ಟು ಬೇಗ ಕಸಕ್ಕೆ ಮುಕ್ತಿ ಕಾಣಿಸಿ ಈ ಸುಂದರ ಬೆಟ್ಟವನ್ನು ರಕ್ಷಿಸುವಂತೆ ತಿಳಿ ಹೇಳಿದರು. ಆ ದಿಸೆಯಲ್ಲಿ ಅಗತ್ಯ ಅನುದಾನ ಬಿಡುಗಡೆಗೆ ತಾವು ಕ್ರಮವಹಿಸುವದಾಗಿಯೂ ಭರವಸೆ ನೀಡಿದರು.

ರೂ. 2.25 ಕೋಟಿ ನೀರು ಘಟಕ : ನಿಶಾನಿ ಬೆಟ್ಟ ಬಳಿ ಕುಡಿಯುವ ನೀರಿನ ಘಟಕ ವೀಕ್ಷಿಸಿ; ರೂ. 2.25 ಕೋಟಿ ವೆಚ್ಚದಲ್ಲಿ 25 ಲಕ್ಷ ಲೀಟರ್ ಸಾಮಥ್ರ್ಯದ ನೆಲಹಂತದ ನೀರು ಸಂಗ್ರಹಾಗಾರ ನಿರ್ಮಾಣದ ಬಗ್ಗೆ ಮಾಹಿತಿ ಪಡೆದರು. ಕಾಮಗಾರಿಯ ಗುಣಮಟ್ಟದೊಂದಿಗೆ; ಬೇಸಿಗೆಯಲ್ಲಿ ಜನತೆಗೆ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಆಯುಕ್ತರೊಂದಿಗೆ ಆರೋಗ್ಯ ಅಧಿಕಾರಿ ನಾಚಪ್ಪ, ಸಹಾಯಕ ಇಂಜಿನಿಯರ್ ನಾಗರಾಜ್, ಸಿಬ್ಬಂದಿ ಓಬಳಿ ಮೊದಲಾದವರು ಹಾಜರಿದ್ದರು.