*ಗೋಣಿಕೊಪ್ಪಲು, ಡಿ. 7 : ಭಾವಗೀತೆ ಮನಸ್ಸನ್ನು ಮುದಗೊಳಿಸುತ್ತದೆ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ನಿರ್ದೇಶಕ ಕಾಟಿಮಾಡ ಶರೀನ್ ಮುತ್ತಣ್ಣ ಹೇಳಿದರು. ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕೊಕ್ಕಲೆಮಾಡ ಮುತ್ತಣ್ಣ, ಪಾರುವಂಗಡ ಜಿ.ಕರುಂಬಯ್ಯ ದತ್ತಿನಿಧಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಭಾವಗೀತೆ ಸ್ಪರ್ದೆಯನ್ನು ಉದ್ಘಾಟಿಸಿ ಮಾತನಾಡಿದರು. ಸರಳತೆ, ಸಜ್ಜನ ನಡವಳಿಕೆ ಮತ್ತು ಬುದ್ಧಿವಂತಿಕೆ ವ್ಯಕ್ತಿಯನ್ನು ಘನತೆಯತ್ತ ಕೊಂಡೊಯ್ಯುತ್ತವೆ. ಸಮಯ ಪರಿಪಾಲನೆ ಮಾಡುವ ಮೂಲಕ ವೃತ್ತಿ ಗೌರವ ಕಾಪಾಡಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ ಸಂಗೀತ ವಿಶ್ವವ್ಯಾಪಿಯಾದುದು. ಸಂಗೀತಕ್ಕೆ ಮನಸ್ಸನ್ನು ಮೃದುಗೊಳಿಸುವ ಶಕ್ತಿ ಇದೆ. ವಿದ್ಯಾರ್ಥಿಗಳು ತಮ್ಮ ಧ್ವನಿಗೆ ನಿಲುಕುವ ರಾಗ, ಸ್ವರ, ಲಯಕ್ಕೆ ಹೊಂದಿಕೆಯಾಗುವ ಭಾವಗೀತೆಗಳನ್ನು ಹಾಡಿದರೆ ಉತ್ತಮ ಗಾಯಕರಾಗಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ ಯಾವದೇ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವದಕ್ಕಿಂತ ಭಾಗವಹಿಸುವದು ಮುಖ್ಯವಾಗಿರುತ್ತದೆ. ಸ್ಪರ್ಧೆಯೇ ನಿಜವಾದ ಬಹುಮಾನ ಎಂದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಎಜುಕೇಷನ್ ಸೊಸೈಟಿ ನಿರ್ದೇಶಕ ಅಳಮೇಂಗಡ ಸುರೇಶ್ ಸುಬ್ಬಯ್ಯ ಕಾಲೇಜಿಗೆ ಉದಾರವಾಗಿ ನೀಡಿದ ರಾಷ್ಟ್ರನಾಯಕರ ಭಾವಚಿತ್ರಗಳನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಎಜುಕೇಷನ್ ಸೊಸೈಟಿ ಸಹಕಾರ್ಯದರ್ಶಿ ಪೋಡಮಾಡ ಮೋಹನ್, ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ನಿರ್ದೇಶಕರಾದ ಅಳಮೇಂಗಡ ಸುರೇಶ್ ಸುಬ್ಬಯ್ಯ, ಮಾಚಂಗಡ ಸುಜಾ ಪೂಣಚ್ಚ, ಅಡ್ಡೇಂಗಡ ಸಜನ್, ಪ್ರಾಂಶುಪಾಲ ಡಾ.ಜೆ. ಸೋಮಣ್ಣ, ಪ್ರೌಢಶಾಲಾ ವಿಭಾಗದ ಹಿರಿಯ ಸಹಾಯಕ ಅಧ್ಯಾಪಕ ಕೆ.ಚಂದ್ರಶೇಖರ್, ಉಪನ್ಯಾಸಕರಾದ ಎನ್.ಕೆ.ಪ್ರಭು, ಪ್ರತಿಭಾ ಉತ್ತಪ್ಪ, ಎಂ.ಪಿ.ರಾಘವೇಂದ್ರ, ಬೆನಡಿಕ್ಟ್ ಫರ್ನಾಂಡೀಸ್, ಡಿ.ಎನ್.ಸುಬ್ಬಯ್ಯ, ಆರ್.ತಿಮ್ಮರಾಜು ಹಾಜರಿದ್ದರು.

ಭಾವಗೀತೆ ಸ್ಪರ್ಧೆ ವಿಜೇತರು: ಅರುವತ್ತೊಕ್ಕಲು ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ಮೃಣಾಲಿನಿ ತಮನ್ ಕರ್ ಪ್ರಥಮ ಬಹುಮಾನ ಪಡೆದುಕೊಂಡರು.

ಪೊನ್ನಂಪೇಟೆ ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಟಿ.ಯು. ಮಹಿತಾ ದ್ವಿತೀಯ ಬಹುಮಾನ ಗಳಿಸಿದರು. ಇದೇ ಕಾಲೇಜಿನ ಸಿ.ಎಸ್. ದೇವಿಕಾ ತೃತೀಯ ಬಹುಮಾನ ಪಡೆದರು.

ವಿದ್ಯಾನಿಕೇತನ ಪಿಯು ಕಾಲೇಜಿನ ಎ.ಜಿ.ಪ್ರಕೃತಿ ಹಾಗೂ ಗೋಣಿಕೊಪ್ಪಲು ಕಾವೇರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಚ್.ಎನ್. ವರ್ಷ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ 17 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

-ಎನ್.ಎನ್.ದಿನೇಶ್