ಗೋಣಿಕೊಪ್ಪಲು, ಡಿ.7: ನಾಲ್ಕೇರಿ ಗ್ರಾ.ಪಂ.ಮತ್ತು ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮನೆಮದ್ದು ತಯಾರಿ ಮತ್ತು ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ನಾಲ್ಕೇರಿ ಗ್ರಾಮದ 150ಕ್ಕೂ ಅಧಿಕ ಮಂದಿಗೆ ತಲಾ ರೂ.3000 ಮೌಲ್ಯದ ಒಟ್ಟು ರೂ.4.50 ಲಕ್ಷಕ್ಕೂ ಅಧಿಕ ಮೊತ್ತದ ಆಯುರ್ವೇದ ಔಷಧಿ ವಿತರಣೆ ಮಾಡಿರುವದಾಗಿ ಮೈಸೂರು ಆಯುರ್ವೇದ ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ.ಮೈತ್ರೇಯಿ ತಿಳಿಸಿದ್ದಾರೆ.

2018-19 ನೇ ಸಾಲಿನ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಅನ್ವಯ ಗ್ರಾಮಸ್ಥರಿಗೆ ಆಯುಶ್ ಸೇವಾ ಗ್ರಾಮ ಶಿಬಿರದಲ್ಲಿ ಸ್ಥಳೀಯ ಔಷಧಿ ಸಸ್ಯಗಳನ್ನು ಬಳಸಿಕೊಂಡು ಮನೆ ಮದ್ದು ತಯಾರಿಸುವ ವಿಧಾನ, ಆರೋಗ್ಯ ಶಿಕ್ಷಣ, ಔಷಧ ಸಸ್ಯ ಸಂರಕ್ಷಣೆ, ಸೋಪು, ಸ್ನಾನದ ಪುಡಿ ತಯಾರಿ ವಿಧಾನ, ಚರ್ಮ ರೋಗಗಳು, ಪಾದ-ಹಿಮ್ಮಡಿ ಒಡೆಯುವದು ಇತ್ಯಾದಿಗಳಿಗೆ ಬಿಳಿ ಮಲಾಮು ತಯಾರಿ, ನೋವಿನ ಎಣ್ಣೆ, ತಲೆಗೂದಲಿನ ಎಣ್ಣೆ, ಚರ್ಮರೋಗದ ಎಣ್ಣೆ ತಯಾರಿ ಇತ್ಯಾದಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತಲ್ಲದೆ, ತಲಾ ಓರ್ವ ಫಲಾನುಭವಿಗಳಿಗೆ ರೂ.3000 ಮೌಲ್ಯದ ಆಯುರ್ವೇದ ಔಷಧಿ ಕಿಟ್, ಒಂದು ಮಾವು ಗಿಡ, ಪನ್ನೇರಳೆ, ತುಳಸಿ ಹಾಗೂ ಇನ್ಸುಲಿನ್ ಗಿಡ (ತಲಾ 2) ನೀಡುವ ಮೂಲಕ ಅವುಗಳ ಗುಣಗಳನ್ನು ವಿವರಿಸಲಾಯಿತು.

ನಾಲ್ಕೇರಿ ಗ್ರಾ.ಪಂ.ಆವರಣದಲ್ಲಿ ನಡೆದ ಆಯುಶ್ ಗ್ರಾಮ ಶಿಬಿರವನ್ನು ಗ್ರಾ.ಪಂ.ಅಧ್ಯಕ್ಷ ಪ್ರಚನ್ ಮುತ್ತಪ್ಪ ಉದ್ಘಾಟಿಸಿದರು. ಬೊಮ್ಮಾಡು, ನಾಲ್ಕೇರಿ, ಗೋಣಿಗದ್ದೆ, ಸಂಪಿಗೆಕೊಲ್ಲಿ, ಬಣ್ಣಮೊಟ್ಟೆ, ನಾಗರಹೊಳೆ ಸರಹದ್ದಿನ ಮಹಿಳೆಯರು ಮತ್ತು ಪುರುಷರು ಹಾಗೂ ನಾಲ್ಕೇರಿ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು, ಮೈ ಕೈ ನೋವು, ದಮ್ಮು-ಕೆಮ್ಮು, ರಕ್ತ ಹೀನತೆ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹೆಚ್ಚಿಸಲು ಮುಖ್ಯವಾಗಿ ರಸಾಯನ, ಚವನಪ್ರಾಶ್, ನೋವು ನಿವಾರಕ ಎಣ್ಣೆಗಳು, ಅಶ್ವಗಂಧ ಲೇಹ್ಯ ಮುಂತಾದ ಔಷಧಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಡಿಓ ಸುರೇಶ್, ಸದಸ್ಯರಾದ ಲಕ್ಷ್ಮಿ,ಕಾಳ, ಮೀನಾ, ಬೋಜಿ ಮತ್ತು ಮೈಸೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯರಾದ ಡಾ.ಸಂಜಯ್, ಡಾ.ನಳಿನಿ, ಡಾ.ರಾಜು, ಡಾ.ಸುನೀತಾ ಸಿದ್ಧೇಶ್, ಡಾ.ರಾಜಶ್ರೀ ಪಾಲ್ ಮುಂತಾದವರು ಪಾಲ್ಗೊಂಡಿದ್ದರು.