ಗೋಣಿಕೊಪ್ಪ ವರದಿ, ಡಿ. 7: ತೋಟದ ಲೈನ್ಮನೆ ಸಮೀಪ ಆಟವಾಡುತ್ತಿದ್ದ ಸಂದರ್ಭ ತೋಟಕ್ಕೆ ಹಾಕಿದ್ದ ಸೋಲಾರ್ ತಂತಿ ವಿದ್ಯುತ್ ತಗುಲಿ ಅಸ್ವಸ್ಥಗೊಂಡಿದ್ದ ಬಾಲಕಿ ಮುರ್ಪಿರಾ ಚೇತರಿಸಿಕೊಳ್ಳುತ್ತಿದ್ದು, ಹೆತ್ತವರಲ್ಲಿ ಆತಂಕ ದೂರವಾಗುವಂತೆ ಮಾಡಿದೆ. ಮೈಸೂರು ಜೆಎಸ್ಎಸ್ ಆಸ್ಪತ್ರೆಯಲ್ಲಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ತೀವ್ರ ನಿಗಾ ಘಟಕದಿಂದ ವಾರ್ಡ್ಗೆ ಸ್ಥಳಾಂತರ ಮಾಡಲಾಗಿದೆ.
ಸಮೀಪದ ಅಂಬುಕೋಟೆ ಎಂಬಲ್ಲಿ ತಾ. 4 ರಂದು ಘಟನೆ ನಡೆದಿದ್ದು, ಶಾಕ್ನಿಂದ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರ್ಪಿರಾ ಸ್ಪಂದಿಸುತ್ತಿರುವದು ಸ್ಥಳಿಯರಿಗೆ ಸಮಾಧಾನ ತಂದಿದೆ.
ಘಟನೆ ವಿವರ ; ಅಂಬುಕೋಟೆಯ ಆಸಿಫ್ ಎಂಬವರ ತೋಟದ ಮನೆಯಲ್ಲಿದ್ದ ಅಸ್ಸಾಂ ಮೂಲದ ಜುಲ್ಫಿಕರ್ ದಂಪತಿ ಪುತ್ರಿ ಮುರ್ಪಿರಾ, ತಾ. 4ರಂದು ಮಧ್ಯಾಹ್ನ ಮನೆಯ ಸಮೀಪ ಆಟವಾಡುತ್ತಿದ್ದ ಸಂದರ್ಭ ತೋಟಕ್ಕೆ ಹಾಕಿದ್ದ ಸೋಲಾರ್ ತಂತಿ ಆಕಸ್ಮಿಕವಾಗಿ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದಳು. ಶಾಕ್ಗೆ ಒಳಗಾಗಿದ್ದ ಬಾಲಕಿಯನ್ನು ಸ್ಥಳೀಯರು ಬಿಡಿಸಲು ಆಗದೆ, ನಂತರ ಕಾಲಿಗೆ ಬಟ್ಟೆ ಸುತ್ತಿ ಬಿಡಿಸಲಾಗಿತ್ತು. ಬಳಿಕ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ನಿರ್ದೇಶನದಂತೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಿಂದ ಹೊರ ಬಂದಿದ್ದಾಳೆ. ಸೋಲಾರ್ ತಂತಿಗೆ ವಿದ್ಯುತ್ ಸಂಪರ್ಕ ನೀಡಿರುವದರಿಂದ ಹೀಗಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.