ಮಡಿಕೇರಿ, ಡಿ. 7: ಇಲ್ಲಿನ ಸರಕಾರಿ ಪ.ಪೂ.ಕಾಲೇಜಿನಲ್ಲಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿ ಸಂಸ್ಥೆ ಬೆಂಗಳೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯಿತು.ನೂತನ ಕಟ್ಟಡದಲ್ಲಿ ವಿದ್ಯಾರ್ಥಿ ಗಳಿಗೆ ರಾಸಾಯನಿಕ, ಭೌತಿಕ ಹಾಗೂ ಗಣಕಯಂತ್ರ, ಪ್ರಯೋಗಾಲಯ ಹಾಗೂ ಹೈಟೆಕ್ ಶೌಚಾಲಯ ಸೌಲಭ್ಯಗಳಿದ್ದು, ರೂ. 52 ಲಕ್ಷ ವೆಚ್ಚದಲ್ಲಿ ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿ ಸಂಸ್ಥೆಯಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಟಿ.ವಿ. ಮಾರುತಿ ತಿಳಿಸಿದರು. ಕಾಲೇಜಿಗೆ ರೂ. 10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಿಸ ಲಾಗುವದು ಎಂದು ಕೂಡ ಭರವಸೆ ನೀಡಿದರು.ನೂತನ ಕಟ್ಟಡದ ಉದ್ಘಾಟನೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೆರವೇರಿಸಿ ದರು. ನಂತರ ಮಾತನಾಡಿದ ಅವರು ಕಟ್ಟಡವನ್ನು ನಿರ್ಮಿಸಿಕೊಟ್ಟ ಆಚಾರ್ಯ ಪಾಠಶಾಲಾ ದತ್ತಿ ಸಂಸ್ಥೆಯನ್ನು ಸ್ಮರಿಸುತ್ತಾ ಹಲವು ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಸಹಾಯ ಮಾಡಲು ಮುಂದಾಗಿ ನಂತರ ಹಿಂಜರಿದ ಸನ್ನಿವೇಶಗಳು ಇವೆ. ಆದರೆ ಇಂದು ಆಚಾರ್ಯ ಪಾಠಶಾಲೆ ದತ್ತಿ ಸಂಸ್ಥೆಯ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಕಡಿಮೆ ಅವಧಿಯಲ್ಲಿ ಈ ಕಟ್ಟಡದ ಕೊಡುಗೆ ನೀಡಿರುವದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಉತ್ತಮ ಸಮಾಜ ನಿರ್ಮಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅಪಾರ ವಾದದ್ದು. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ತುಂಬಾ ಹಾನಿ ಉಂಟಾಗಿದ್ದು
(ಮೊದಲ ಪುಟದಿಂದ) ಇಂತಹ ಸಂದರ್ಭ ಆಚಾರ್ಯ ಪಾಠ ಶಾಲಾ ಶಿಕ್ಷಣ ದತ್ತಿ ಸಂಸ್ಥೆಯು ಉತ್ತಮ ಕಟ್ಟಡ ಕಟ್ಟಿಸಿಕೊಟ್ಟಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳು ವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಹೇಳಿದರು.
ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ, ಆ ದಿಸೆಯಲ್ಲಿ ವಿದ್ಯಾದಾನದಂತಹ ಶ್ರೇಷ್ಠ ದಾನವನ್ನು ಕೊಡಗು ಜಿಲ್ಲೆಗೆ ಬೆಂಗಳೂರಿನ ಆಚಾರ್ಯ ಶಿಕ್ಷಣ ಸಂಸ್ಥೆಯವರು ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪನಂದಜೀ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಒಳ್ಳೆಯ ಶಿಕ್ಷಣ ಪಡೆದು ಸಮಾಜಕ್ಕೆ ತಮ್ಮದೇ ಆದ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಆಚಾರ್ಯ ಪಾಠ ಶಾಲಾ ಶಿಕ್ಷಣ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ನೆಹರು ಕೋ ಆಪರೇಟಿವ್ ಸೊಸೈಟಿಯ ಮುಖ್ಯಸ್ಥರಾದ ಕೆ.ಆರ್.ನರಸಿಂಹ ಮೂರ್ತಿ ಅವರು ಮಾತನಾಡಿ ಕೊಡಗು ಸೈನ್ಯಕ್ಕೆ, ಶಿಸ್ತಿಗೆ ಹೆಸರುವಾಸಿ ವಿದ್ಯಾರ್ಥಿಗಳು ಉತ್ತಮ ಶಿಸ್ತನ್ನು ರೂಡಿಸಿಕೊಂಡು ಯಶಸ್ವಿಗೊಳಿಸಬೇಕು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛ ಭಾರತ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಆಚಾರ್ಯ ಪಾಠಶಾಲಾ ಶಿಕ್ಷಣ ದತ್ತಿ ಸ್ಥಾಪಕ ಆಚಾರ್ಯ ಅವರ ಪುತ್ರ ಎ.ಪಿ ಆಚಾರ್ಯ ಸಂಸ್ಥೆಯ ಬೆಳವಣಿಗೆ ಹಾಗೂ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿನ ನೆಹರು ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನೂತನ ಕಟ್ಟಡಕ್ಕೆ ಅಗತ್ಯವಿರುವ ಪೀಠೋಪಕರಣಗಳನ್ನು ನೀಡಿದರು. ಸಮಾರಂಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ದತ್ತಿ ನಿಧಿಯಿಂದ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿಷ್ಣುಭರತ್, ಎ.ಪಿ.ಆಚಾರ್ಯ, ಖಜಾಂಚಿ ಕೆ.ಎಲ್.ರಮೇಶ್, ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಪಿ.ನರಸಿಂಹಮೂರ್ತಿ, ಎ.ಮುರುಳೀಧರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಪಿ.ಆರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ದೇವಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ ಎ.ಪಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಭವಾನಿ, ನಿವೃತ್ತ ಪ್ರಾಂಶುಪಾಲ ಕೆಂಚಪ್ಪ ಜಿ, ಶಕ್ತಿ ದಿನಪತ್ರಿಕೆಯ ವ್ಯವಸ್ಥಾಪಕಿ ಪ್ರಜ್ಞಾ ಇತರರು ಇದ್ದರು.