ಸಿದ್ದಾಪುರ, ಡಿ.7: ನೆಲ್ಯಹುದಿ ಕೇರಿಯ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರಿಗೆ ಪರಿಹಾರ ಕೇಂದ್ರ ತೊರೆಯುವಂತೆ ಜಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ ಮನವಿ ಮಾಡಿಕೊಂಡರು. ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ, ನಲ್ವತ್ತೇಕರೆ ಭಾಗದಲ್ಲಿ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ನೆಲ್ಯಹುದಿಕೇರಿ ಸರಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿ ಪರಿಹಾರ ಕೇಂದ್ರವನ್ನು ತೊರೆಯು ವಂತೆ ತಿಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಅರೆಕಾಡುವಿನಲ್ಲಿರುವ ಅಭ್ಯತ್‍ಮಂಗಲ ಗ್ರಾಮದಲ್ಲಿದ್ದ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವು ಗೊಳಿಸಲಾಗಿದೆ ತೆರವುಗೊಳಿಸಿದ ಜಾಗದಲ್ಲಿ ಕೆಲಸ ಕಾರ್ಯಗಳು ಬಿರುಸಿನಿಂದ ಸಾಗುತ್ತಿದ್ದು, ಸದ್ಯದಲ್ಲೇ ಕೆಲಸ ಕಾರ್ಯಗಳು ಮುಕ್ತಾಯ ಗೊಳ್ಳಲಿವೆ, ಜಾಗವನ್ನು ಸಮತಟ್ಟಾಗಿ ಮಾಡಿ ಅದೇ ಜಾಗದಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುವ ದೆಂದರು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಯೋಜನಾ ಅಧಿಕಾರಿಗಳು ಹಾಗೂ ಪುನರ್ವಸತಿ ನಿರ್ಮಾಣವನ್ನು ವಹಿಸಿಕೊಂಡಿರುವ ನಿರ್ಮಿತಿ ಕೇಂದ್ರದವರು ಪರಿಶೀಲನೆ ನಡೆಸಿದ್ದು, ಬಡಾವಣೆಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸುವದಾಗಿ ಹೇಳಿದರು. ಜಿಲ್ಲಾಡಳಿತದ ವತಿಯಿಂದ ತ್ವರಿತ ಗತಿಯಲ್ಲಿ ಪುನರ್ವಸತಿ ಒದಗಿಸಿಕೊಡುವದರಿಂದ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ

(ಮೊದಲ ಪುಟದಿಂದ) ಸಂತ್ರಸ್ತ ಕುಟುಂಬಗಳಿಗೆ ಬಾಡಿಗೆ ರೂಪದಲ್ಲಿ ರೂ.50 ಸಾವಿರವನ್ನು ನೀಡಲಾಗುವದು. ಕೂಡಲೇ ಪರಿಹಾರ ಕೇಂದ್ರವನ್ನು ಬಿಡುವಂತೆ ತಿಳಿಸಿದರು. ಈ ಬಗ್ಗೆ ಸಂತ್ರಸ್ತರು ಎಲ್ಲರೂ ಸೇರಿ ತಾ. 8 ರಂದು (ಇಂದು) ಪರಿಹಾರ ಕೇಂದ್ರದಲ್ಲಿ ಸಭೆ ಸೇರಿ ಕೇಂದ್ರವನ್ನು ತೊರೆಯುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಒಂದೆರಡು ದಿನದಲ್ಲಿ ಪರಿಹಾರ ಕೇಂದ್ರ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಒತ್ತುವರಿ ಜಾಗ ಪರಿಶೀಲನೆ: ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕೊಡಗು - ಶ್ರೀರಂಗಪಟ್ಟಣದ ಘಟ್ಟದಳ ಬಳಿ ಈ ಹಿಂದೆ ಒತ್ತುವರಿ ಭೂಮಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡು ಜಾಗವನ್ನು ಗುರುತಿಸಿತ್ತು. ಆದರೆ ವೀರಾಜಪೇಟೆಯ ಈ ಹಿಂದಿನ ತಹಶೀಲ್ದಾರ್ ಪುರಂದರ್ ಹಾಗೂ ಸಿದ್ದಾಪುರದ ಪಿ.ಡಿ.ಓ. ವಿಶ್ವನಾಥ್ ಅವರು ಆ ಜಾಗದಲ್ಲಿ ನೀರು ಹರಿಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ಜಾಗವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಘಟ್ಟದಳದ ಒತ್ತುವರಿ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಹೋಬಳಿ ಉಪ ತಹಶೀಲ್ದಾರ್ ಚಿಣ್ಣಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ನೆಲ್ಯಹುದಿಕೇರಿ ಗ್ರಾಮಲೆಕ್ಕಿಗ ಸಂತೋಷ್, ಪಿ.ಡಿ.ಒ. ಅನಿಲ್ ಕುಮಾರ್, ಸಿದ್ದಾಪುರ ಗ್ರಾಮ ಲೆಕ್ಕಿಗರಾದ ಓಮಪ್ಪಬಣಾಕರ್, ಅನೀಸ್, ಹೋರಾಟ ಸಮಿತಿಯ ಪ್ರಮುಖರಾದ ಪಿ.ಆರ್. ಭರತ್, ನೆಲ್ಯಹುದಿಕೇರಿ ಗ್ರಾ.ಪಂ. ಉಪಾಧ್ಯಕ್ಷೆ ಸೆಫಿಯಾ, ಹಾಗೂ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.

-ವರದಿ: ವಾಸು ಎ.ಎನ್.