ವೀರಾಜಪೇಟೆ, ಡಿ. 7: ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಎನ್.ಎಸ್.ಎಸ್.ನ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೋಂಡ ಶಶಿ ಸುಬ್ರಮಣಿ ಅಭಿಪ್ರಾಯಪಟ್ಟರು.

ಅಮ್ಮತ್ತಿಯ ಸರ್ಕಾರಿ ಸ.ಮಾ.ಪ್ರಾ. ಶಾಲೆಯಲ್ಲಿ ನಡೆಯುತ್ತಿರುವ ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಎನ್.ಎಸ್.ಎಸ್ ಘಟಕವು ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಜವಾಬ್ದಾರಿಯುತ ಪ್ರಜೆಯನ್ನಾಗಿ ಮಾಡುತ್ತದೆ. ಎನ್.ಎಸ್.ಎಸ್.ನಿಂದ ಸಂಸ್ಥೆ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿ ಬಳಿಕ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ವೇದಿಕೆಯಾಗಿದೆ. ಎನ್.ಎಸ್.ಎಸ್ ಘಟಕವು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಸತ್‍ಪ್ರಜೆಗಳಾಗಿ ಬಾಳಬೇಕು ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಕ್ಕಚ್ಚೀರ ರೋನಾ ಭೀಮಯ್ಯ ಶಿಬಿರ ಯಶಸ್ವಿಯಾಗಿ ನಡೆಯಲು ಶುಭಕೋರಿದರು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಮಾತನಾಡಿ, ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುತ್ತದೆ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತದೆ ಎಂದರು.

ಅಮ್ಮತ್ತಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೆಚ್.ಇ. ರಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅಮ್ಮತ್ತಿ ಶಾಲೆಯ ಮುಖ್ಯೋಪಾಧ್ಯಾಯರಾದ ಸೋಮಕ್ಕ ಹೆಚ್.ಎಸ್., ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಹೆಚ್.ಆರ್ ಅರ್ಜುನ್ ಉಪಸ್ಥಿತರಿದ್ದರು.

ಈ ಸಂದರ್ಭ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೋನಾ ಭೀಮಯ್ಯ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ 65ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.