ಪೊನ್ನಂಪೇಟೆ, ಡೊ. 7: ಪೊನ್ನಂಪೇಟೆಯಲ್ಲಿ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಪ್ರಾರಂಭವಾಗಿ 6 ತಿಂಗಳು ಕಳೆದರೂ, ಶಾಲಾ ಅಭಿವೃದ್ಧಿ ಸಮಿತಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಉದಾಸೀನತೆಯಿಂದ ಇನ್ನೂ ರಚನೆಯಾಗಿರುವದಿಲ್ಲ. ಇದುವರೆಗೆ ಸರಕಾರದಿಂದ ಯಾವದೇ ಅನುದಾನ ದೊರಕಿರುವದಿಲ್ಲ.

ಸರಕಾರದ ಅನುದಾನ ಶಾಲಾ ಅಭಿವೃದ್ಧಿ ಸಮಿತಿಯ ಮೂಲಕ ಆಯಾ ತಾಲೂಕಿನ ಶಾಸಕರು ಅಧ್ಯಕ್ಷರಾಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಸೇರಿ 3 ಶಾಲಾ ಅಭಿವೃದ್ಧಿ ಸಮಿತಿಯಿಂದ ತಲಾ 5 ರಂತೆ 15 ಸದಸ್ಯರ ಸಮಿತಿ ರಚಿಸಿ ಸರಕಾರದಿಂದ ನೂತನ ಪಬ್ಲಿಕ್ ಶಾಲೆಗೆ ಅನುದಾನವನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಶಾಸಕರು ಪ್ರವರ್ತಕರಾಗಬೇಕೆಂದು ಪೊನ್ನಂಪೇಟೆ ಹಳೆಯ ವಿದ್ಯಾರ್ಥಿ ಸಂಘದ 5ನೇ ವಾರ್ಷಿಕ ಮಹಾಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಮಿತಿ ಅಧ್ಯಕ್ಷ ಕಾಕಮಡ ಎನ್. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಯಾ ಚಂಗಪ್ಪ ಮಾತನಾಡಿ, ಶಾಲಾ ಅಭಿವೃದ್ಧಿ ಸಮಿತಿ ರಚನೆಯಲ್ಲಿ ಸೌಲಭ್ಯವನ್ನು ಪಡೆಯಲು ಅನುಕೂಲವಾಗಲಿದೆ. ಶಾಲಾ ಮುಖ್ಯಸ್ಥರ ನಿರ್ಲಕ್ಷತೆಯಿಂದ ಇದುವರೆಗೆ ಯಾವದೇ ಸಭೆ ನಡೆಯಲಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಜಯ ಅವರು ತಮ್ಮ ಶಾಲಾ ಸಮಿತಿಯ ಪರವಾಗಿ 5 ಸದಸ್ಯರ ಹೆಸರನ್ನು ಈಗಾಗಲೇ ಶಿಕ್ಷಣ ಇಲಾಖೆಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಿತಿಯ ಉಪಾಧ್ಯಕ್ಷ ಬಾನಂಗಡ ಎನ್. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, ಇದಕ್ಕೆ ದಾನಿಗಳ ಸಹಕಾರ ಬೇಕೆಂದು ಕೋರಿದರು. ನಿವೃತ್ತ ಅರಣ್ಯಾಧಿಕಾರಿ ಹಾಗೂ ಸಮಿತಿಯ ಖಜಾಂಚಿ ಚಿಮ್ಮಣಮಡ ಸೋಮಯ್ಯ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕಳೇರ ಕುಶಾಲಪ್ಪ ಅವರು ಸಮಿತಿಯ ಹೆಸರನ್ನು ಹಳೆಯ ವಿದ್ಯಾರ್ಥಿ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಬೈಲ ತಿದ್ದುಪಡಿಗೆ ಇಲಾಖೆ ಬರೆದುಕೊಳ್ಳವಂತೆ ತಿಳಿಸಿದರು. ಸರಕಾರದಿಂದ ಬರುವ ಅನುದಾನವನ್ನು ಶಾಲಾ ಅಭಿವೃದ್ಧಿ ಸಮಿತಿ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಅಧ್ಯಕ್ಷ ಕಾಕಮಡ ಚಂಗಪ್ಪ ಅವರು ಶತಮಾನೋತ್ಸವ ಆಚರಿಸಿದ ಶಾಲೆ ಇಂದು ದಾನಿಗಳ ಹಾಗೂ ಸದಸ್ಯರ ಕೊರತೆ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಅಭಿಯಾನ ಹಾಗೂ ದಾನಿಗಳನ್ನು ಗುರುತಿಸಿ ಶಾಲಾ ಅಭಿವೃದ್ಧಿಗೆ ಪ್ರಯತ್ನಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಶಾಲಾ ಮಕ್ಕಳಿಗೆ ಉಚಿತವಾಗಿ ಕಬ್ಬಿಣದ ಆಟದ ಉಯ್ಯಾಲೆಯನ್ನು ನಿರ್ಮಿಸಿ ಕೊಟ್ಟ ಹೈಸೊಡ್ಲೂರು ಗ್ರಾಮದ ದಾನಿಗಳಾದ ಚೆಕ್ಕೆರ ಕಾಳಯ್ಯ ಅವರ ಸೇವೆಯನ್ನು ಪ್ರಶಂಸಿಸಿ ದಾಖಲೆ ಮಾಡಲಾಯಿತು.

ರೇಖಾ ಶ್ರೀಧರ್ ಪ್ರಾರ್ಥಿಸಿದರು. ಶಾಲಾ ಶಿಕ್ಷಕಿ ಪುಳ್ಳಂಗಡ ರೋಜಿ ಸ್ವಾಗತಿಸಿ, ನಿರೂಪಿಸಿದರು. ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ರಾಮಕೃಷ್ಣ ವಂದಿಸಿದರು.

ಸಭೆಯಲ್ಲಿ ಶಾಜಿ ಅಚ್ಚುತ್ತನ್, ಚೆಪ್ಪುಡೀರ ಲಾಲ ಮುತ್ತಪ್ಪ, ಕೋದೇಂಗಡ ವಿಠಲ, ಕಾಕಮಡ ಅರ್ಜುನ್, ಪುಚ್ಚಿಮಡ ಹರೀಶ್ ದೇವಯ್ಯ, ಇತರರು ಚರ್ಚೆ ನಡೆಸಿದರು.