ಮಡಿಕೇರಿ, ಡಿ. 6: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿರುವ ವರಿಗೆ ಶೀಘ್ರವಾಗಿ ಮನೆ ಹಾಗೂ ಮನೆ ಬಾಡಿಗೆ ನೀಡಬೇಕೆಂದು ಜಂಬೂರು ಸಂತ್ರಸ್ತರ ಸಂಘದ ಕಾರ್ಯದರ್ಶಿ ಬಾಚಳ್ಳಿರ ಸುಬ್ಬಯ್ಯ ಹಾಗೂ ನಿರ್ದೇಶಕ ತಾಚಮಂಡ ಕರುಂಬಯ್ಯ ಅವರುಗಳು ಆಗ್ರಹಿಸಿದ್ದಾರೆ.
ಸಂತ್ರಸ್ತರಿಗೆ ಇನ್ನೂ ಕೂಡ ಮನೆಗಳನ್ನು ನೀಡಿಲ್ಲ; ಹತ್ತು ತಿಂಗಳ ಕಾಲ ಮನೆ ಬಾಡಿಗೆ ನೀಡುವದಾಗಿ ಅಂದಿನ ಸರಕಾರ ಹೇಳಿತ್ತಾದರೂ, ಕೆಲವರಿಗೆ 7-8 ತಿಂಗಳ ಬಾಡಿಗೆ ಮಾತ್ರ ಬಂದಿದೆ. ಕಳೆದ ಆಗಸ್ಟ್‍ನಿಂದ ಬಾಡಿಗೆ ಹಣವನ್ನು ಕೂಡ ನಿಲ್ಲಿಸಿದ್ದು, ಸಂತ್ರಸ್ತರು ಸಂಕಷ್ಟ ಎದುರಿಸುವಂತಾ ಗಿದೆ. ಮಕ್ಕಂದೂರು, ಮಾದಾಪುರ, ಗರ್ವಾಲೆ, ಕಿರಗಂದೂರು ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರು ತೀರಾ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನ ದೊರಕುತ್ತಿಲ್ಲ. ಸ್ಪಂದಿಸದಿದ್ದರೆ ಸಂತ್ರಸ್ತರನ್ನು ಒಗ್ಗೂಡಿಸಿ ಹೋರಾಟಕ್ಕೆ ಇಳಿಯುವದಾಗಿ ಎಚ್ಚರಿಸಿದ್ದಾರೆ.