ಮಡಿಕೇರಿ, ಡಿ. 6: ಪ್ರಸ್ತುತ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದಿರುವ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೊಡಗು - ಮೈಸೂರು ಮಾಜಿ ಸಂಸದ ಹೆಚ್. ವಿಶ್ವನಾಥ್ ಸೇರಿದಂತೆ 12ಕ್ಕೂ ಅಧಿಕ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಣಸೂರು ಕ್ಷೇತ್ರದಲ್ಲಿ ತಾವು ಉಸ್ತುವಾರಿ ತಂಡದಲ್ಲಿ ಕೆಲಸ ಮಾಡಿದ್ದು; ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಅವರು ಐದು ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು; ರಾಜ್ಯ ಉಪಚುನಾವಣೆಯಲ್ಲಿ ವಿಪಕ್ಷಗಳಿಗೆ ಅಚ್ಚರಿಯ ಫಲಿತಾಂಶದೊಂದಿಗೆ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರಕ್ಕೆ ಸ್ಪಷ್ಟ ಬಹುಮತ ದೊರಕಲಿದೆ ಎಂದರು.

ಎನ್‍ಕೌಂಟರ್‍ಗೆ ಸ್ವಾಗತ : ಅತ್ಯಾಚಾರ ಆರೋಪಿಗಳಿಗೆ ತೆಲಂಗಾಣ ಪೊಲೀಸರು ಎನ್‍ಕೌಂಟರ್ ನಡೆಸಿರುವದು ಸ್ವಾಗತವೆಂದು ಇದೇ ವೇಳೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಎಂ.ಪಿ. ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿದರು. ದೇಶದಲ್ಲಿ ಅತ್ಯಾಚಾರ, ಕೊಲೆಗಳನ್ನು ನಿಯಂತ್ರಿಸಲು ಪೊಲೀಸರು ಇಂತಹ ದಿಟ್ಟ ಕ್ರಮ ಕೈಗೊಳ್ಳಬೇಕಿದ್ದು; ಕಾನೂನು ಇನ್ನಷ್ಟು ಕಠಿಣವಾಗಿ ಜಾರಿಯಾಗಬೇಕಿದೆ ಎಂದು ಆಶಿಸಿದರು.