ಶ್ರೀಮಂಗಲ, ಡಿ. 6: ರೈತರು ಬ್ಯಾಂಕ್‍ಗಳಿಂದ ಸಾಲ ಪಡೆಯುವ ಸಂದರ್ಭ ತಮ್ಮ ತೋಟ ಹಾಗೂ ಗದ್ದೆಯ ಅಡಮಾನ ದಾಖಲೆ ಪತ್ರ ಮಾಡಿ ನೋಂದಾಯಿಸಲು ಪೊನ್ನಂಪೇಟೆಯ ಉಪ ನೋಂದಾವಣಿ ಕಚೇರಿಯಲ್ಲಿ ವ್ಯವಹರಿಸುವ ಸಂದರ್ಭ ಅಲ್ಲಿ ತಗಲುವ ವೆಚ್ಚವನ್ನು ಒಂದೇ ಬ್ಯಾಂಕ್‍ನ ಒಂದೇ ಶಾಖೆಯಿಂದ ಡಿಡಿ ಪಡೆಯುವಂತೆ ಒತ್ತಾಯಿಸುತ್ತಿರುವದಕ್ಕೆ ಕೊಡಗು ಬೆಳೆಗಾರರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಒಕ್ಕೂಟದಿಂದ ಪೊನ್ನಂಪೇಟೆ ಉಪನೋಂದಾವಣಿ ಅಧಿಕಾರಿ ಅನಿತಾ ಅವರಿಗೆ ಆಕ್ಷೇಪ ಸಲ್ಲಿಸಿದ್ದು, ಈ ಸಮಸ್ಯೆಯನ್ನು ಒಂದು ವಾರದೊಳಗೆ ಸರಿಪಡಿಸಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕು ಹಾಗೂ ಅದರ ಶಾಖೆಗಳಿಂದ ಡಿಡಿ ಹೊಂದಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದೆ.

ಈಗಾಗಲೇ ಪೊನ್ನಂಪೇಟೆ ಉಪನೋಂದಾವಣಿ ಕಚೇರಿಯು ತಮ್ಮ ಕಚೇರಿಯಲ್ಲಿ ಬ್ಯಾಂಕ್‍ಗಳಿಂದ ಸಾಲ ಪಡೆಯಲು ನೋಂದಾವಣಿ ಮಾಡುವ ಸಂದರ್ಭ ಪೊನ್ನಂಪೇಟೆಯ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ತೆಗೆದುಕೊಂಡಿರುವ ಡಿಡಿಗಳನ್ನು ಮಾತ್ರ ಸ್ವೀಕರಿಸುತ್ತಿದ್ದು, ಉಳಿದ ಯಾವದೇ ಬ್ಯಾಂಕ್‍ಗಳಿಂದ ತೆಗೆದ ಡಿಡಿಗಳನ್ನು ತೆಗೆದುಕೊಳ್ಳದೆ ರೈತರನ್ನು ವಾಪಾಸ್ಸು ಕಳುಹಿಸಿರುವದಕ್ಕೆ ತೀವ್ರ ಅಸಮಾಧಾನವನ್ನು ಬೆಳೆಗಾರರ ಒಕ್ಕೂಟ ವ್ಯಕ್ತಪಡಿಸಿದೆ.

ರೈತರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ತಕ್ಷಣದಿಂದಲೇ ಜಿಲ್ಲಾ ನೋಂದಾವಣಿ ಅಧಿಕಾರಿಯವರಿಗೆ ಪತ್ರ ಬರೆದು ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ನ ಡಿಡಿಗಳನ್ನು ಪಡೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಪತ್ರ ಬರೆಯಲಾಗುವದು. ಈ ನಿಟ್ಟಿನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಕೋರಲಾಗುವದೆಂದು ಮನವಿ ಸ್ವೀಕರಿಸಿ ಪೊನ್ನಂಪೇಟೆ ಉಪನೋಂದಾವಣಿ ಕಚೇರಿಯ ಅಧಿಕಾರಿ ಅನಿತಾ ಅವರು ಭರವಸೆ ನೀಡಿದರು. ಅಧಿಕಾರಿಯವರಿಗೆ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ ಮತ್ತು ಖಜಾಂಚಿ ಮಾಣೀರ ವಿಜಯ ನಂಜಪ್ಪ ಲಿಖಿತ ಮನವಿ ಸಲ್ಲಿಸಿದರು.