ವೀರಾಜಪೇಟೆ, ಡಿ.6: ಯುವ ಜನತೆಯು ಇಂದು ಸಮಾಜಕ್ಕೆ ಮಾರಕವಾದ ಪಿಡುಗುಗಳಿಗೆ ದಾಸರಾಗುತ್ತಿರುವದು ಕಳವಳಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎನ್.ವಿ ಕೊನಪ್ಪ ರೆಡ್ಡಿ ಇಂತಹ ಕೃತ್ಯಗಳಲ್ಲಿ ತೊಡಗದಂತೆ ಕರೆ ನೀಡಿದ್ದಾರೆ.

ವೀರಾಜಪೇಟೆ ನಗರ ಆರಕ್ಷಕ ಠಾಣೆಯ ವತಿಯಿಂದ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಪರಾದ ತಡೆ ಮಾಸಾಚರಣೆಯ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನ್ಯಾಯಾಧೀಶರು ಪ್ರತಿಯೊಬ್ಬ ನಾಗರಿಕನ್ನು ಪ್ರತಿಯೊಂದು ಹಂತದಲ್ಲೂ ದೇಶದ ಕಾನೂನು ಹಿಂಬಾಲಿಸಿಕೊಂಡು ಬರುತ್ತದೆ. ಇತ್ತ್ತೀಚೆಗೆ ದೇಶದ ಕೆಲವು ಸ್ಥಳಗಳಲ್ಲಿ ನಡೆದಿರುವ ಸಮಾಜ ಘಾತುಕ ಕೃತ್ಯಗಳಲ್ಲಿ ಯುವ ಜನಾಂಗವು ಭಾಗಿಯಾಗಿರುವದು ದುರದೃಷ್ಟಕರ ಸಂಗತಿಯಾಗಿದೆ. ಯುವ ಜನತೆಯು ಸಾಮಾಜಿಕ ಪಿಡುಗುಗಳಿಂದ ದೂರವಿರಬೇಕು ಮತ್ತು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಧ್ವನಿಯಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಮದಲೈ ಮುತ್ತು ಅವರು ಮಾತನಾಡಿ ಅಪರಾದ ಕೃತ್ಯಗಳಲ್ಲಿ ಯುವ ಸಮೂಹವು ಭಾಗಿಗಳಾಗುತಿರುವದು ದುರಂತ, ವಿದ್ಯಾರ್ಥಿ ಮತ್ತು ಪುತ್ತೂರಿನ ಕಾಲೇಜು ವಿದ್ಯಾರ್ಥಿ ಜೊತೆಗೂಡಿ ಸಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಬಿತ್ತಿಚಿತ್ರದಿಂದ ಈ ಘಟನೆಯಿಂದ ಕಾಲೇಜು ವಿದ್ಯಾರ್ಥಿಯ ಪೋಷಕರಿಗೆ ಮತ್ತು ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಯಾವದೇ ಕೃತ್ಯಗಳಲ್ಲಿ ಭಾಗಿಗಳಾಗದೆ ಸತ್ಪ್ರಜೆಗಳಾಗಿ ಜೀವನದಲ್ಲಿ ಮುನ್ನಡೆಯಿರಿ ಎಂದು ಅವರು ಹೇಳಿದರು.

ವೀರಾಜಪೇಟೆ ಆರಕ್ಷಕ ಉಪವಿಭಾಗದ ಡಿ.ವೈಎಸ್ಪಿ ಜಯಕುಮಾರ್ ಅವರು ಮಾತನಾಡಿ ಅಪರಾದ ಸಂಭವಿಸುವ ಮುನ್ನ ನಾವುಗಳು ಮುಂಜಾಗ್ರತ ಕ್ರಮಗಳನ್ನು ಪಾಲಿಸಿದಲ್ಲಿ ಕೊಂಚ ಮಟ್ಟಿಗೆ ಅಪಾರಾದಗಳು ತಡೆಹಿಡಿಯ ಬಹುದಾಗಿದೆ. ಕೇಂದ್ರ ಸರ್ಕಾರವು ಇಂದು ಸಾರ್ವಜನಿಕ ಬಳಕೆಗೆ ಉಪಯೋಗವಾಗುವಂತೆ ತುರ್ತು ಪರಿಸ್ಥಿತಿಯಲ್ಲಿ ನೀಡಬಹುದಾದ ಸಂಖ್ಯೆಗಳನ್ನು ಕೇಂದ್ರಿಕರಿಸಿ ಒಂದೇ ಸಂಖ್ಯೆಯಲ್ಲಿ ನಮೂದಿಸಿದೆ (ಅಂದರೆ 112 ಸಂಖ್ಯೆ) ಗೆ ತುರ್ತು ಸಂದರ್ಭದಲ್ಲಿ ಕರೆ ಮಾಡಿದಲ್ಲಿ ಸುಲಭ ರೀತಿಯಲ್ಲಿ ಸ್ಪಂದಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ವೃತ್ತ ನೀರಕ್ಷಕ ಕ್ಯಾತೆ ಗೌಡ, ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹೆಚ್.ಎಂ ಮರಿಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಸ್ವಾಗತ, ನಿರೂಪಣೆಯನ್ನು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಕಾವೇರಮ್ಮ ಅವರು ನಿರ್ವಹಿಸಿದರು. ನಗರ ಠಾಣಾಧಿಕಾರಿ ಮರಿಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

-ಕೆ.ಕೆ.ಎಸ್.