ಕೂಡಿಗೆ, ಡಿ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಕೆ ನಡೆದಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ಫಲಾನುಭವಿಗಳನ್ನು ಕೈಬಿಟ್ಟು, ಸ್ಥಳೀಯೇತರ ಹಾಗೂ ನಿವೇಶನ ಇರುವವರನ್ನು ಆಯ್ಕೆ ಮಾಡಲಾಗಿದೆ ಎಂದು ದಲಿತ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ 25ಕ್ಕೂ ಅಧಿಕ ಕುಟುಂಬಗಳು ನಿವೇಶನದಿಂದ ವಂಚಿತರಾಗಿದ್ದು, ಪ್ರಕೃತಿ ವಿಕೋಪದ ಸಂದರ್ಭ ಇದ್ದ ಮನೆಯನ್ನು ಕಳೆದುಕೊಂಡು, ಹಾನಿಯಾಗಿರುವ ಮಂದಿಗೆ ಆಸರೆಗೆ ಆಗ್ರಹಿಸಿದೆ.

ಈ ಬಗ್ಗೆ ಕೂಡಿಗೆ ಗ್ರಾಮ ಪಂಚಾಯ್ತಿಯು ಗಮನಹರಿಸದೆ, ಪರಿಶಿಷ್ಟ ಜಾತಿಯ ಕಾಲೋನಿ ಯಲ್ಲಿರುವ ಫಲಾನುಭವಿ ಗಳಿಗೆ ಹಾಗೂ ಗ್ರಾ.ಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಅನ್ಯಾಯವೆಸಗಿದರೆ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ಮಾಡಲಾಗುವದು ಎಂದು ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಡಿ.ಅಣ್ಣಯ್ಯ, ಕಾರ್ಯದರ್ಶಿ ಗಣೇಶ್, ದಯಾನಂದ್, ಪ್ರಭು, ಪ್ರಶಾಂತ್, ಗಿರೀಶ್ ಹಾಗೂ ಗ್ರಾಮಸ್ಥರು ಪತ್ರಿಕಾ ಹೇಳಿಕೆ ನೀಡಿದ್ದಾರೆ.