ಮಡಿಕೇರಿ, ಡಿ. 6 : ಡಾ.ಬಿ.ಆರ್ ಅಂಬೇಡ್ಕರ್ ಅವರ 63 ನೇ ಪರಿನಿರ್ವಾಣ ದಿನ ಕಾರ್ಯಕ್ರಮವು ಜಿಲ್ಲಾ ಪಂಚಾಯತ್ ನೂತನ ಭವನದಲಿ ನಡೆಯಿತು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಬಸವಣ್ಣನ ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವ ಕಾಣಬಹುದಾಗಿದೆ. ಅದೇ ನಿಟ್ಟಿನಲ್ಲಿ ಡಾ.ಬಿ.ಆರ್. ಅಂಬೆಡ್ಕರ್ ಅವರು ದೇಶಕ್ಕೆ ಪ್ರಜಾಪ್ರಭುತ್ವದ ಸರ್ಕಾರವನ್ನು ಸಂವಿಧಾನದ ಮುಖಾಂತರ ನೀಡಿದ್ದಾರೆ ಎಂದರು.ಮಹಾ ಮಾನವತಾವಾದಿ, ಸಾಮಾಜಿಕ ಕಳಕಳಿಯ ಹರಿಕಾರ, ಶ್ರೇಷ್ಠ ದಾರ್ಶನಿಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆಯುವ ಮೂಲಕ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ಕೂಡಿಗೆ ಡಯಟ್‍ನ ಉಪ ನ್ಯಾಸಕ ಕೆ.ವಿ .ಸುರೇಶ್ ಮಾತನಾಡಿ ಸಮಾನತೆ ಮತ್ತು ಸಹೋದರತೆಗಾಗಿ ಕರ್ತವ್ಯ ದೃಢೀಕರಿಸಿ ಅರಿವಿನ ದೀಪವನ್ನು ಜಗತ್ತಿಗೆ ಹಂಚಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದರು. ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರು ರಾಷ್ಟ್ರದ ಮರೆಯಲಾಗದ ಕಣ್ಮಣಿಗಳು, 12 ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರು ಬದುಕಿಗೆ ಸಂವಿಧಾನ ನೀಡಿದರು. (ಮೊದಲ ಪುಟದಿಂದ) 20 ನೇ ಶತಮಾನದಲ್ಲಿ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿದರು. ಸಮಾಜದ ಉದ್ದಾರಕ್ಕಾಗಿ ಪರಿಶ್ರಮ, ತ್ಯಾಗ, ತನುಮನದ ಕಾಳಜಿಯ ಮೂಲಕ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿ ಜೀವಿತಾವದಿ üಯಲ್ಲಿ ಇಷ್ಟೆಲ್ಲ ಸಾಧನೆಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟವರು ಎಂದರು.

ಭಾರತದ ಇತಿಹಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸುವಂತಾಗಬೇಕು. ಬದುಕಿದ್ದಾಗ ನಿಂದನೆ, ಅಪಮಾನಗಳ ಮೂಟೆ ಹೊತ್ತ ಅಂಬೇಡ್ಕರ್ ಅವರು, ಮಾನವ ಭಾರತ ಕಟ್ಟಿದರು. ಲೋಕದ ಹಿತಕ್ಕಾಗಿ, ಮನುಷ್ಯ ಮನುಷ್ಯನಾಗಿ ಉಳಿಯಲು ಪ್ರೇರಕವಾಗಿದ್ದಾರೆ. ದೇಶದ ಕಾನೂನುಗಳ ಕಾನೂನು ಪ್ರಜಾಪ್ರಭುತ್ವದ ತಳಹದಿಯಾಗಿರುವ ಸಂವಿದಾನವನ್ನು ಸರ್ಕಾರದ ಅಸ್ತಿತ್ವ ಮತ್ತು ಕಾರ್ಯವ್ಯಾಪ್ತಿ ನಿರ್ಧರಿಸುವ ಹಕ್ಕು ಸಂವಿಧಾನವಾಗಿದೆ ಎಂದರು.

ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಸದಸ್ಯರಾದ ಬಾನಂಡ ಪ್ರಥ್ಯು, ಎ.ಭವ್ಯ, ಮುರಳಿ ಕರುಂಬಮಯ್ಯ, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಪ್ರೋಬೆಶನರಿ ಎಸಿಎಫ್ ನಿಲೇಶ್ ಶಿಂಎದೆ, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿ.ಆರ್.ಭಾರತಿ ಇತರರು ಪಾಲ್ಗೊಂಡಿದ್ದರು.

ಸೋಮವಾರಪೇಟೆಯಲ್ಲಿ ದಿನಾಚರಣೆ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 63ನೇ ಪರಿನಿರ್ವಾಣ ದಿನಾಚರಣೆಯನ್ನು ಸೋಮವಾರಪೇಟೆಯಲ್ಲಿ ಆಚರಿಸಲಾಯಿತು.

ಪಟ್ಟಣದ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿ ಸಂವಿಧಾನ ಶಿಲ್ಪಿಗೆ ಜಯಘೋಷ ಮೊಳಗಿಸಿದರು.

ನಂತರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು, ಹೋರಾಟದ ಹಾದಿಯನ್ನು ಮೆಲುಕು ಹಾಕಲಾಯಿತು. ಶೋಷಿತರ ಪರವಾಗಿ ನಿರಂತರ ಧ್ವನಿಯಾಗಿದ್ದ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಹನುಮಯ್ಯ, ಉಪಾಧ್ಯಕ್ಷ ಹೊನ್ನಪ್ಪ, ಕೆ.ಬಿ. ರಾಜು, ಸಲಹೆಗಾರ ಬಿ.ಈ. ಜಯೇಂದ್ರ, ಪ್ರಮುಖರಾದ ಎಸ್.ಆರ್. ಮಂಜುನಾಥ್, ಜೋಯಪ್ಪ, ರಾಜಪ್ಪ, ಸತೀಶ್, ಮಹೇಶ್, ದಸಂಸ ಭೀಮವಾದದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಡಿ. ಲತಾ, ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಕರ್ನಾಟಕದ ತಾಲೂಕು ಅಧ್ಯಕ್ಷೆ ವೀಣಾ, ಪದಾಧಿಕಾರಿಗಳಾದ ಪವಿತ್ರ, ರಮೇಶ್, ಸ್ವಾಮಿ, ಸಂಗಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಪದಾಧಿಕಾರಿಗಳು ವಿವಿಧ ಕ್ರಾಂತಿ ಗೀತೆಗಳನ್ನು ಹಾಡಿದರು.

ಕುಶಾಲನಗರ: ಶೋಷಿತರ ಧ್ವನಿಯಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ಈ ದಿನವನ್ನು ಸ್ಮರಿಸುವ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದಿವಾಕರ್ ಹೇಳಿದರು.

ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ನೌಕರರ ಸಂಘದ ವತಿಯಿಂದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ 63ನೇ ವರ್ಷ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಪ್ರತಿಯೊಬ್ಬರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಅಂಬೇಡ್ಕರವರು ಯಾವದೇ ಒಂದು ಜಾತಿ ಸಮುದಾಯಕ್ಕೆ ಸೀಮಿತ ಅಲ್ಲ ಎಂದ ಅವರು, ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ.ಎಚ್.ಕೆ.ಕೇಶವಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ, ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಸಂವಿಧಾನದ ಆಶಯ ಪರಿಪೂರ್ಣವಾಗಿ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ನೌಕರರ ಸಂಘದ ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೋಟ್ಯಾಂತರ ಜನರಿಗೆ ಸ್ಪೂರ್ತಿಯಾಗಿದ್ದು, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ ಸ್ವಾಭಿಮಾನದ ಬದುಕಿಗೆ ದಾರಿ ತೋರಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.

ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಯು.ಟಿ.ರಾಮಯ್ಯ, ಸಂಘದ ನಿರ್ದೇಶಕರಾದ ನಿವೃತ್ತ ಪೆÇಲೀಸ್ ಅಧಿಕಾರಿ ಎಚ್.ಕೆ.ರವೀಂದ್ರ ನಾಥ್, ಕೆ.ಎ.ಅಣ್ಣಯ್ಯ, ನಿವೃತ್ತ ಜಿ.ಪಂ.ಸಹಾಯಕ ಕಾರ್ಯದರ್ಶಿ ಬಾಬು, ಸದಸ್ಯರಾದ ಎ.ಎಸ್. ಜೋಯಪ್ಪ, ಎಚ್.ಕೆ.ರಾಜಪ್ಪ, ಸ್ವಾಮಿ, ಕಮಲಮ್ಮ, ಬೆಳ್ಳಿಯಪ್ಪ, ಕಾಳಪ್ಪ ಮತ್ತಿತರರು ಇದ್ದರು.

ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹೋಬಳಿ ಘಟಕದ ವತಿಯಿಂದ ಡಾ. ಅಂಬೇಡ್ಕರ್ ರವರ 63ನೇ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಗೌರವ ಸಮರ್ಪಿಸಲಾಯಿತು.

ನಂತರ ಸುಳುಗಳಲೆ ಕಾಲೋನಿಯ ಸಮುದಾಯ ಭವನದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಘ್ನೇಶ್ವರ ವಿದ್ಯಾಸಂಸ್ಥೆಯ ಅಧ್ಯಾಪಕ ಕೆ.ಪಿ. ಜಯಕುಮಾರ್ ಮಾತನಾಡಿ, ಡಾ. ಅಂಬೇಡ್ಕರ್ ದಲಿತರ ಬದುಕಿನ ಸೂರ್ಯ. ಶತಮಾನಗಳಿಂದ ಶೋಷಿತರಾಗಿದ್ದ ಪರಿಶಿಷ್ಟರ ಬಾಳಿಗೆ ಬೆಳಕು ನೀಡಿದ ಅವರ ಹುಟ್ಟಿದ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಆಚರಿಸಲಾಗುತ್ತಿದೆ. ಅಂತೆಯೇ ಅವರ ಮರಣದ ದಿನವನ್ನು ದೇಶದಾದ್ಯಂತ ಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಹಿಡಿದ ಪೆನ್ನಿನಿಂದ ದೇಶ ಬದಲಾದದ್ದು ಮಾತ್ರವಲ್ಲ ಪರಿಶಿಷ್ಟರ ಬೇಡಿಕೆಗಳನ್ನೂ ಈಡೇರಿಸಿತು. ಸಂವಿಧಾನದ ಮೂಲಕ ಅಕ್ಷರದ ಮೂಲಕ ಕೊಡುಗೆ ನೀಡಿದ ಅಂಬೇಡ್ಕರ್ ಶಕ್ತಿ, ಧೈರ್ಯ ಸ್ವಾಭಿಮಾನದ ಪ್ರತೀಕವಾಗಿದ್ದರು ಎಂದರು.

ಅರಣ್ಯ ಇಲಾಖೆಯ ನೌಕರ ಗೋವಿಂದ್ ರಾಜ್ ಮಾತನಾಡಿ, ಇಂದಿನ ಯುವ ಜನಾಂಗ ಆಚಾರ - ವಿಚಾರಗಳತ್ತ ಗಮನ ಹರಿಸಿ, ಡಂಭಾಚಾರದ ಆಚರಣೆಗಿಂತ ಚಳವಳಿಗೆ ಜೀವ ಕೊಡಬೇಕು. ಅಂಬೇಡ್ಕರ್ ಅವರ ಧೈರ್ಯ, ಆದರ್ಶಗಳನ್ನು ಪಾಲಿಸಬೇಕು. ಚಳವಳಿ, ಸಂಘಟನೆಗಳಿಂದ ಮಾತ್ರ ಪರಿಶಿಷ್ಟರ ರಕ್ಷಣೆ ಸಾಧ್ಯ. ಪರಿಶಿಷ್ಟರ ಕಲಾತಂಡಗಳ ಕ್ರಾಂತಿಗೀತೆಗಳ ಸಾಹಿತ್ಯ ಯುವ ಜನಾಂಗವನ್ನು ಬಡಿದೆಬ್ಬಿಸುತ್ತಾ ಸ್ಫೂರ್ತಿ ನೀಡುತ್ತಿದೆ ಎಂದರು.

ವಿದ್ಯುತ್ ಇಲಾಖೆ ಸಿಬ್ಬಂದಿ ರಘು ಹಾಗೂ ದಸಂಸ ಪದಾಧಿಕಾರಿ ಕೆ.ಪಿ. ರವಿ, ಮಾತನಾಡಿದರು. ಕೊಡ್ಲಿಪೇಟೆಯ ಕಲಾವೃಂದದ ಕಲಾವಿದರಾದ ಶಾಂತಕುಮಾರ್, ಜಗದೀಶ್ ತಂಡದವರು ಕ್ರಾಂತಿಗೀತೆ ಹಾಡಿ ರಂಜಿಸಿದರು. ಸಮಿತಿ ಪದಾಧಿಕಾರಿಗಳಾದ ಶಿವಶಂಕರ್, ಪುಟ್ಟಸ್ವಾಮಿ, ಎಚ್.ಬಿ. ಜಯಮ್ಮ, ಸಣ್ಣಯ್ಯ, ಎಸ್.ಜೆ. ರಾಜಪ್ಪ, ವೇದಕುಮಾ, ಜೆ.ಆರ್. ಪಾಲಾಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ, ಜನಪ್ರತಿನಿಧಿಗಳಾದ ಡಿ.ಪಿ. ಭೋಜಪ್ಪ, ಆದಿಲ್ ಪಾಶ, ಅಬ್ಬಾಸ್, ಎನ್.ಕೆ. ಸುಮತಿ, ನೇತ್ರಾವತಿ, ಎನ್.ಕೆ. ಅಪ್ಪಸ್ವಾಮಿ, ಸಿ.ಜೆ. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.