ವಿಶೇಷ ವರದಿ: ಕೂಡಂಡ ರವಿ

ಹೊದ್ದೂರು, ಡಿ. 6: ‘ಹಣದ ಮರ’ವೆಂಬಂತೆ ಹೆಸರಿಗೆ ಭಾಜನವಾಗಿರುವ ‘ಸಿಲ್ವರ್ ಓಕ್’ ಮರಕ್ಕೆ ಮಾರಣಾಂತಿಕÀ ರೋಗ ಕಾಣಿಸಿಕೊಂಡಿದೆ. ಪರಿಣಾಮ ಮರಗಳು ಅಕಾಲಿಕವಾಗಿ ಸಾಯುತ್ತಿರುವದು ಕಂಡುಬಂದಿದೆ. ಇದರಿಂದಾಗಿ ಜಿಲ್ಲೆಯ ಬೆಳೆಗಾರರು ಮತ್ತೊಂದು ಕಾಯಿಲೆಯ ಆಘಾತವನ್ನು ಎದುರಿಸುವಂತಾಗಿದೆ. ಕಳೆದ ವರ್ಷ ಕೆಲವು ತೋಟಗಳಲ್ಲಿ ಬೆರೆಳೆಣಿಕೆಯ ಮರಗಳು ಅಕಾಲಿಕವಾಗಿ ಮರಣವನ್ನಪ್ಪಿದ್ದವು. ಈ ವರ್ಷ ಇವುಗಳ ಸಂಖ್ಯೆ ದ್ವಿಗುಣವಾಗಿದೆ !

ಮರಗಳ ಸರಣಿ ಸಾವು: ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳ ಬೆಳೆಗಾರರು ತಮಗೆ ಅನುಕೂಲವಾದ ಕಡೆಗಳಲ್ಲಿ ಸಿಲ್ವರ್ ಓಕ್ ಮರಗಳನ್ನು ಬೆಳೆಸುತ್ತಿರುವರು. ತೋಟಗಳಲ್ಲಿ ಮಿಶ್ರ ಬೆಳೆಗೆ ಪೂರಕವಾಗಿ ಈ ಮರಗಳನ್ನು ನೆಡಲಾಗುತ್ತಿದೆ. ಗದ್ದೆಯ ಬದುಗಳಲ್ಲಿ, ತೋಟಗಳ ಬೇಲಿಗಳಲ್ಲಿ ಸೇರಿದಂತೆ ಇತರ ಕಡೆ ವ್ಯಾಪಕವಾಗಿ ಈ ಗಿಡಗಳನ್ನು ಕೃಷಿಕ ಸಮುದಾಯ ಬೆಳೆಯುತ್ತಿರುವರು. ಮಳೆಗಾಲ ಮುಗಿದು ಇದೀಗ ಬಿಸಿಲಿನ ಝಳ ಅಧಿಕವಾಗುತ್ತಿರುವಂತೆ ಮರಗಳ ಸರಣಿ ಸಾವು ಕೆಲವು ಕಡೆ ಗೋಚರವಾಗಿವೆ.

ಅಧಿಕ ಮಳೆ ಕಾರಣವೇ?

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಈ ವರ್ಷ ಅತಿವೃಷ್ಟಿಯಿಂದಾಗಿ ಅಪಾರ ಹಾನಿ ಸಂಭವಿಸಿತ್ತು. ಕೊಡಗು ಜಿಲ್ಲೆಯಲ್ಲಿ ಮಳೆಯು 5-6 ತಿಂಗಳುಗಳ ಕಾಲ ನಿರಂತರವಾಗಿ ಸುರಿದಿತ್ತು. ಇದರ ಪರಿಣಾಮವೋ ಏನೋ ಎಂಬಂತೆ ಮಳೆಗಾಲ ಮುಗಿದ ಕೂಡಲೇ ನೂರಾರು ಸಿಲ್ವರ್ ಓಕ್ ಮರಗಳು ‘ಸಿಕ್ಕ್’ಗೆ ಬಲಿಯಾಗಿವೆ. ಭತ್ತದ ಗದ್ದೆಗಳನ್ನು ತೋಟ ಮಾಡಿರುವೆಡೆ, ಅಧಿಕ ನೀರು ನಿಲ್ಲುವ ಕಡೆ, ನೀರು ಸಲೀಸಾಗಿ ಹರಿದು ಹೋಗದ ಕಡೆಗಳಲ್ಲಿ ಅತ್ಯಧಿಕ ಮರಗಳು ಅಕಾಲಿಕವಾಗಿ ಸಾವನ್ನಪ್ಪುತ್ತಿವೆ. ಆದರೂ, ಬೆಟ್ಟ- ಗುಡ್ಡಗಳಲ್ಲಿಯೂ ಇವುಗಳ ಸಂಖ್ಯೆಯು ಕಡಿಮೆಯೇನಲ್ಲ! ಹಲವಾರು ಮರಗಳು ಈಗಾಗಲೇ ಸತ್ತಿವೆ. ಕೆಲವು ಸಾಯುವ ಹಂತದಲ್ಲಿವೆ. ಸತ್ತಿರುವ ಮರಗಳಲ್ಲಿ ಹುಳಗಳು ಸೇರಿ ಮರಗಳನ್ನು ತಿನ್ನುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿವೆ. ಮರಗಳ ಬುಡ ಭಾಗಗಳಲ್ಲಿ ಹುಳಗಳ ಹಿಕ್ಕೆಯು ಪುಡಿ ರೂಪದಲ್ಲಿ ಉದುರುತ್ತಿರುವದು ಕಂಡುಬರುತ್ತಿದೆ.

ಕಾಳು ಮೆಣಸಿಗೂ ಮಾರಕ

ರೋಗ ಬಾಧಿತ ಸಿಲ್ವರ್ ಓಕ್ ಮರಗಳ ಎಲೆಗಳು ನಿಧಾನಕ್ಕೆ ಒಣಗುತ್ತಿವೆ. ಜೊತೆಗೆ ಈ ಜಾತಿಯ ಮರಗಳಿಗೆ ಹಬ್ಬಿಸಲಾಗಿರುವ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳ ಫಸಲಿಗೂ ರೋಗವು ಮಾರಕವಾಗಿದೆ. ಕೆಲವು ಕಡೆ ಕಾಳು ಮೆಣಸಿನ ಬಳ್ಳಿಗಳಿಗೆ ಕಾಯಿಲೆ ಕಾಣಿಸಿಕೊಂಡಿದೆ. ಇನ್ನು ಕೆಲವೆಡೆ ಇಳುವರಿ ಇರುವ ಕಾಳು ಮೆಣಸಿನ ಬಳ್ಳಿಗಳು ದಿಢೀರ್ ಧರಾಶಾಹಿಯಾಗಿವೆ. ಸಿಲ್ವರ್ ಓಕ್ ಮರಗಳ ಕಾಯಿಲೆ ಕಾಣಿಸಿಕೊಂಡಿರುವದು ಕಾಳು ಮೆಣಸಿನ ಇಳುವರಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ.

ಪರವಾನಿಗೆ ರಹಿತ ಕಡಿತಲೆ

ಕರ್ನಾಟಕ ರಾಜ್ಯದ ಅರಣ್ಯ ಇಲಾಖೆಯ ಕಾನೂನಿನ (1969 ರ) ಪ್ರಕಾರ ಸಿಲ್ವರ್ ಓಕ್ ಸೇರಿದಂತೆ ಹತ್ತಾರು ಬಗೆಯ ಮರಗಳ ಕಡಿತಲೆಗೆ, ಸಾಗಾಟಕ್ಕೆ ಪರವಾನಿಗೆಯ ಅಗತ್ಯವಿಲ್ಲ. ಇದಲ್ಲದೆ, 1964ರ ಭೂ ಕಂದಾಯ ಅಧಿನಿಯಮಗಳ ಪ್ರಕಾರ ಮರದ ಮಾಲೀಕನಿಗೆ ಮರದ ಸಂಪೂರ್ಣ ಹಕ್ಕಿದೆ. ಇದನ್ನೇ ಲಾಭವಾಗಿಸಲು ಹೊರಟ ಕರ್ನಾಟಕದ ಬೆಳೆಗಾರರು ಅಧಿಕ ಪ್ರಮಾಣದಲ್ಲಿ ಸಿಲ್ವರ್ ಓಕ್ ಮರ ಬೆಳೆದು ಮಾರಾಟ ಮಾಡುತ್ತಿರುವರು. ‘ಸಿಲ್ವರ್ ಬೆಳೆದವರಿಗೆ ಚಿನ್ನದ ಬೆಲೆಯೂ’ ಕೆಲವೊಮ್ಮೆ ದೊರೆತಿದೆ. ಬಹುತೇಕ ಬೆಳೆಗಾರರಿಗೆ ಈ ಹಣವು ಅಪತ್ಕಾಲದ ಧನದಂತೆ ನೆರವಿಗೆ ಬಂದಿದೆ. ಇಂತಹವರಿಗೆ ಸಿಲ್ವರ್ ಓಕ್ ಮರಗಳು ದಿಢೀರ್ ಸಾವನ್ನಪ್ಪುತ್ತಿರುವದು ‘ಮಿಂಚಿನಾಘಾತ’Àವನ್ನೇ ನೀಡಿದೆ.

ಮರ ಸಂಪತ್ತಿಗೆ ಮಾರಕ

ಈ ಮರಗಳಿಗೆ ಕಂಡುಬಂದಿರುವ ಮಾರಕ ಕಾಯಿಲೆಯನ್ನು ಶೀಘ್ರವಾಗಿ ನಿಯಂತ್ರಿಸದಿದ್ದಲ್ಲಿ ಇದು ಜಿಲ್ಲೆ, ರಾಜ್ಯದ ಮರ ಸಂಪತ್ತಿಗೆ ಮಾರಕವಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿಜ್ಞಾನಿ ವರ್ಗ ಕಾರ್ಯ ಪ್ರವೃತ್ತವಾಗಬೇಕಿದೆ.