ಕೂಡಿಗೆ, ಡಿ. 6 : ಹುದುಗೂರು ಗ್ರಾಮದಲ್ಲಿರುವ ಸರ್ವೇ ನಂ.8/3 ರಲ್ಲಿ ನಾಲ್ಕು ಎಕರೆ ಜಾಗವನ್ನು ಈಗಾಗಲೇ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಲು ತೀರ್ಮಾನಿ ಸಿದ್ದು, ಹಂಚಿಕೆ ಪ್ರಕ್ರಿಯೆ ಪ್ರಾರಂಭ ಗೊಂಡು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಆದರೆ ನಿವೇಶನಕ್ಕೆ ಕಾದಿರಿಸಿದ ಜಾಗವು ಅರಣ್ಯ ಇಲಾಖೆಗೆ ಸೇರಿದ ಜಾಗವಾಗಿರುತ್ತದೆ. ಅಲ್ಲದೆ, ಈ ಪ್ರದೇಶಕ್ಕೆ ಹಾರಂಗಿಯಿಂದ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ ಆದ್ದರಿಂದ ಈ ಪ್ರದೇಶದಲ್ಲಿ ನಿವೇಶನ ಹಂಚಿಕೆ ಕಾರ್ಯವನ್ನು ಕೈಬಿಡಬೇಕೆಂದು ಹುದುಗೂರು ಮತ್ತು ಕಾಳಿದೇವರ ಹೊಸೂರು ಗ್ರಾಮಸ್ಥರು ಸಭೆ ನಡೆಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಜಲಾವೃತಗೊಳ್ಳುವ ಪ್ರದೇಶವನ್ನು ಹೊರತು ಪಡಿಸಿ ಉಳಿದ 1 ಎಕರೆ ಪ್ರದೇಶದಲ್ಲಿ ಮೂರು ಗ್ರಾಮಗಳಿಗೆ ಅನುಕೂಲ ವಾಗುವ ರೀತಿಯಲ್ಲಿ ಅನುವು ಮಾಡಿಕೊಡಬೇಕೆಂದು ಕಳೆದ ವರ್ಷ ಕ್ಷೇತ್ರದ ಶಾಸಕರಿಗೂ ಮನವಿ ಮಾಡಿದ್ದು, ಶಾಸಕರು ಮನವಿಗೆ ಸ್ಪಂದಿಸಿ, ಸ್ಥಳ ಪರಿಶೀಲಿಸಿ ನಂತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿರುತ್ತಾರೆ. ಹೀಗಿರುವಾಗ ಜಲಾವೃತಗೊಂಡ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲು ಹೊರಟಿರುವದು ಸರಿಯಾದ ಕ್ರಮವಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಾ. 6ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿರುವದಾಗಿ ತಿಳಿಸಿದ್ದಾರೆ.
- ಕೆ. ಕೆ. ನಾಗರಾಜಶೆಟ್ಟಿ.