ಶನಿವಾರಸಂತೆ, ಡಿ. 6: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಕಿಯರ ಪಿಯು ಕಾಲೇಜಿನ 35 ವಿದ್ಯಾರ್ಥಿನಿಯರು ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್‍ನಲ್ಲಿ ಹತ್ಯೆಗೈದ ತೆಲಂಗಾಣದ ಪೊಲೀಸ್ ಅಧಿಕಾರಿ ಕನ್ನಡಿಗ ವಿಶ್ವನಾಥ್ ಸಜ್ಜನರ್ ಹಾಗೂ ತಂಡದವರ ಕ್ರಮವನ್ನು ಸ್ವಾಗತಿಸಿ; ಶ್ಲಾಘಿಸಿ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಠಾಣೆಯ ಮುಂಭಾಗ ನಡೆದ ಸರಳ ಸಭೆಯಲ್ಲಿ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಶಿಕ್ಷಕ ಕೆ.ಪಿ. ಜಯಕುಮಾರ್, ರೋಟರಿ ಸಂಸ್ಥೆ ನಿರ್ದೇಶಕ ಎ.ಡಿ. ಮೋಹನ್ ಕುಮಾರ್ ಎಎಸ್‍ಐ ಎಚ್.ಎಂ. ಗೋವಿಂದ್ ಮಾತನಾಡಿ ತೆಲಂಗಾಣ ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಷಣ್ಮುಖ, ಪೊಲೀಸ್ ಸಿಬ್ಬಂದಿ ಶಫೀರ್, ಷಣ್ಮುಖನಾಯಕ್, ಜಯಕುಮಾರ್, ಶಶಿ, ಸವಿತಾ ಹಾಜರಿದ್ದರು.
ಗೌಡ ಸಮಾಜಗಳ ಒಕ್ಕೂಟ
ಆಂಧ್ರದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್‍ಕೌಂಟರ್ ಮಾಡಿ ಸಾಯಿಸಿದ್ದು, ಕೊಡಗಿನ ಸಮಸ್ತ ಗೌಡ ಜನಾಂಗದವರ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಹೆಮ್ಮೆಯಿಂದ ಪೊಲೀಸರ ಕಾರ್ಯಕ್ಕೆ ನೈತಿಕ ಸ್ಥೈರ್ಯ ತುಂಬಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಹೇಳಿದ್ದಾರೆ. ಆಂಧ್ರ ಸರಕಾರ ಪೊಲೀಸರಿಗೆ ಎಲ್ಲ ರೀತಿಯಲ್ಲೂ ಕಾನೂನಿನ ನೈತಿಕ ಬೆಂಬಲ ನೀಡಬೇಕು.
ಮಾನವ ಹಕ್ಕುಗಳ ಆಯೋಗ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೊಲೀಸರಿಗೆ ನೈತಿಕವಾಗಿ ಬೆಂಬಲಿಸಬೇಕೆಂದು ಆಗ್ರಹಪಡಿಸಿದ್ದಾರೆ.