ಮಡಿಕೇರಿ, ಡಿ. 6: ಇಲ್ಲಿನ ಮುತ್ತಪ್ಪ ದೇವಾಲಯದಲ್ಲಿ ಆಚರಣೆಗಳ ಬಗ್ಗೆ ಮೂಲ ಮುತ್ತಪ್ಪ ಸನ್ನಿಧಿ ಪರಶಿನಿಕಡವು ಕ್ಷೇತ್ರದ ಮುಖ್ಯಸ್ಥರಿಂದ ಅಗತ್ಯ ನಿರ್ದೇಶನ ಪಡೆದುಕೊಳ್ಳುವಂತೆ ಆಡಳಿತ ಮಂಡಳಿಗೆ ದೈವಜ್ಞರು ಸಲಹೆ ನೀಡಿದ್ದಾರೆ.
ಇಂದು ಅಷ್ಟಮಂಗಲ ಪ್ರಶ್ನೆಯ ಅಂತಿಮ ವೇಳೆಯಲ್ಲಿ ದೈವಜ್ಞರಾದ ಕಾಂಞಂಗಾಡಿನ ತಂಬಾನ್ ಪಣಿಕರ್ ಹಾಗೂ ಮಧು ಸೂದನ್ ಪಣಿಕರ್ ಈ ಕುರಿತು ಪ್ರಕಟಿಸಿದರು.
ಸನ್ನಿಧಿಯ ತಂತ್ರಿಗಳಾದ ಪಂದಳದ ಪಾರ್ಥ ಸಾರಥಿ ಸ್ಕಂದನ್ ಉಪ ಸ್ಥಿತಿಯಲ್ಲಿ ಅಷ್ಟಮಂಗಲದಲ್ಲಿ ಗೋಚರ ಫಲಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುತ್ತಾ, ಕೊಡಗಿನ ತಲಕಾವೇರಿ-ಭಾಗಮಂಡಲ ಹಾಗೂ ಪಾಡಿ ಶ್ರೀ ಇಗ್ಗುತ್ತಪ್ಪ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ದೋಷ ನಿವಾರಣೆಗಾಗಿ ವಿಶೇಷ ಪೂಜೆಗಳನ್ನು ಕೈಗೊಳ್ಳಬೇಕೆಂದು ಸಲಹೆಯಿತ್ತರು.
ದೇವಾಲಯ ಆಡಳಿತ ವರ್ಗ, ಪೂಜಾರಿಗಳು, ಸದ್ಭಕ್ತರ ಸಹಿತ ಯಾರೊಬ್ಬರೂ ಭವಿಷ್ಯದಲ್ಲಿ ಸನ್ನಿಧಿಗೆ ಅಪಚಾರವಾಗುವಂತೆ ನಡೆದುಕೊಳ್ಳಬಾರದೆಂದು ನಿರ್ದೇಶಿಸುತ್ತಾ, ಈ ನಿಟ್ಟಿನಲ್ಲಿ ಪ್ರಶ್ನೆಯ ಕೊನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಯಿತು.
ಅಲ್ಲದೆ ಕ್ಷೇತ್ರದಲ್ಲಿನ ಮುನಿದೋಷ ನಿವಾರಣೆಗಾಗಿ ಶೃಂಗೇರಿ ಕ್ಷೇತ್ರಕ್ಕೆ ತೆರಳಿ ಜಗದ್ಗುರುಗಳ ಅನುಗ್ರಹ ಪಡೆಯುವದು, ಶ್ರೀ ಲಕ್ಷ್ಮೀ, ಸರಸ್ವತಿ ಪೂಜೆ ನೆರವೇರಿಸುವದು ಸೇರಿದಂತೆ; ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವತೆಗಳ ನಿತ್ಯ ಸೇವೆಯಲ್ಲಿ ಯಾವದೇ ಲೋಪವಾಗದಂತೆ ಕಾಳಜಿ ವಹಿಸುವಂತೆ ಸಮಿತಿಗೆ ತಿಳಿ ಹೇಳಿದರು.
ಈ ವೇಳೆ ಪ್ರಮುಖರಾದ ಟಿ.ಕೆ. ಸುಧೀರ್, ಕೆ.ಎಸ್. ರಮೇಶ್, ಉಣ್ಣಿಕೃಷ್ಣ, ಶಾರದಾ ರಾಮನ್, ಸುಬ್ರಮಣಿ ಅಶೋಕ್ ಸೇರಿದಂತೆ ಇತರ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು.