ಕೂಡಿಗೆ, ಡಿ. 4: ಸಮಾಜದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಯುವ ಸಂಘಟನೆಗಳು ಮುಂದಾಗ ಬೇಕು ಹಾಗೂ ಯುವಕರಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಯುವ ಸಂಘಟನೆಗಳು ಸಮಾಜಮುಖಿ ಕಾರ್ಯನಿರ್ವಹಿಸಿದ್ದಲ್ಲಿ ಗ್ರಾಮಗಳ ಪ್ರಗತಿಯೊಂದಿಗೆ ಇಡೀ ಸಮಾಜವೇ ಬೆಳವಣಿಗೆ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಹೇಳಿದರು.
ಕೂಡಿಗೆಯ ಶ್ರೀ ಉದ್ಭವ ಯುವಕ ಸಂಘದ ವತಿಯಿಂದ 51ನೇ ಷಷ್ಠಿ ಸುಬ್ರಹ್ಮಣ್ಯ ಜಾತ್ರಾ ರಥೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 17ನೇ ವರ್ಷದ ಸಾಮಾಜಿಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕ ಸಂಘವು ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯಗಳಲ್ಲಿ ವೃದ್ಧರನ್ನು ಗೌರವಿಸುವದು ಹಾಗೂ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವದು ಶ್ಲಾಘನೀಯ ಎಂದರು.
ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳ ಪಡುವ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಬಹುಮಾನ ವಿತರಣೆ ಮಾಡಲಾಯಿತು. ನಂತರ ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮದ ವೃದ್ಧರಿಗೆ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಉದ್ಯಮಿ ಕುಮಾರ್, ಕಿಶೋರ ಕೇಂದ್ರದ ಮುಖ್ಯೋಪಾಧ್ಯಾಯಿನಿ ಉಮಾ, ಪ್ರೋ ಕಬಡ್ಡಿ ರಾಜ್ಯಮಟ್ಟದ ಕಬಡ್ಡಿ ಆಟಗಾರ ಅವಿನಾಶ್, ಕೂಡಿಗೆ ಪ.ಪೂ. ಕಾಲೇಜಿನ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಸಂಘದ ಮೇಲುಸ್ತುವಾರಿ ನಂದಕುಮಾರ್, ಸಂಘದ ಅಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಕಾಂತರಾಜ್, ಕಾರ್ಯದರ್ಶಿ ರಾಜು, ಖಜಾಂಚಿ ಹರೀಶ್ ಸೇರಿದಂತೆ ಸಂಘದ ನಿರ್ದೇಶಕರು ಇದ್ದರು.
ವೇದಿಕೆ ಕಾರ್ಯಕ್ರಮದ ನಂತರ ಕೂಡುಮಂಗಳೂರು ಯಂಗ್ ಸ್ಟಾರ್ ಡ್ಯಾನ್ಸ್ ಗ್ರೂಪ್ ವತಿಯಿಂದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಕುಶಾಲನಗರದ ಝೇಂಕಾರ್ ಮೆಲೋಡಿಸ್‍ನಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.