ಗುಡ್ಡೆಹೊಸೂರು, ಡಿ. 4: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಕುಶಾಲನಗರ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಡಿ.ಜೆ. ಪದ್ಮನಾಭ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಿದರು. ಕ.ಸಾ.ಪ. ಕುಶಾಲನಗರ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮತ್ತು ನಾಗೇಶ್ ಎನ್.ಜಿ. ಮತ್ತು ಪತ್ರಕರ್ತ ಕುಡೆಕ್ಕಲ್ ಗಣೇಶ್ ಹಾಜರಿದ್ದರು. ಲೋಕೇಶ್ ಸಾಗರ್ ಮಾತನಾಡಿ ರಾಜ್ಯದ ವಿವಿಧ ಭಾಗಗಳ ಜನಪದ ಹಾಡು, ಕಲೆ, ಆಚಾರ, ಉಡುಗೆ, ತೊಡುಗೆ, ಭಾಷೆ ಬಗ್ಗೆ ಮಾಹಿತಿ ನೀಡಿದರು, ರಂಗಸ್ವಾಮಿ ಜನಪದ ಕಲೆಯ ಬಗ್ಗೆ ಉಪನ್ಯಾಸ ನೀಡಿದರು. ಮಕ್ಕಳಲ್ಲಿ ಜನಪದ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂಬದಾಗಿ ತಿಳಿಸಿದರು. ಜನಪದ ಬಗ್ಗೆ ಮಕ್ಕಳಲ್ಲಿ ಪ್ರಶ್ನೆ ಕೇಳಿ ಸರಿ ಉತ್ತರ ನೀಡಿದವರಿಗೆ ಸ್ಥಳದಲ್ಲಿ ಬಹುಮಾನ ನೀಡಲಾಯಿತು.
ಸಂಸ್ಥೆಯ ಪಿ.ಯು.ಸಿ. ವಿದ್ಯಾರ್ಥಿಗಳಾದ ರೋಜಾ ಮತ್ತು ಸಂಭ್ರಮ್ ಜನಪದ ಗೀತೆಗಳನ್ನು ಹಾಡಿದರು. ಶಾಲೆಯ ಸಹಶಿಕ್ಷಕ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕ ವೃಂದದವರು ಹಾಜರಿದ್ದರು. ಶಾಲೆಯ ತಂಡ ಜನಪದ ನೃತ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಸಂದರ್ಭ ಅವರನ್ನು ಅಭಿನಂದಿಸಲಾಯಿತು.