*ಗೋಣಿಕೊಪ್ಪಲು, ಡಿ. 4: ಪ್ರಾಪ್ತ ವಯಸ್ಸಿಗೆ ಬರುವವರೆಗೂ ಯಾವದೇ ಯುವಕ ಯುವತಿಯರು ವಿವಾಹವಾಗಬಾರದು ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಕ್ಕುಗಳ ಹಬ್ಬ ಹಾಗೂ ಜಾಥಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಚಿನ್ ಸುವರ್ಣ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ 1989ರಲ್ಲಿ ವಿಶ್ವಸಂಸ್ಥೆ ಕಾಯ್ದೆ ಜಾರಿಗೆ ತಂದಿತು. 1962ರಲ್ಲಿಯೇ ಭಾರತ ಸರ್ಕಾರ ಮಕ್ಕಳ ಬದುಕುವ ಹಕ್ಕು, ರಕ್ಷಣೆ ಹಕ್ಕು, ವಿಕಾಸ ಹಕ್ಕು, ಭಾಗವಹಿಸುವ ಹಕ್ಕು ಗಳನ್ನು ಜಾರಿಗೆ ತಂದಿತು. ಅಂತರರಾಷ್ಟ್ರೀಯ ಮಕ್ಕಳ ಹಕ್ಕು ಜಾರಿಗೆ ಬಂದು 40 ವರ್ಷಗಳಾಯಿತು. ಇದರ ಬಗ್ಗೆ ಅರಿವು ಮೂಡಿಸಿಕೊಂಡು ಮಕ್ಕಳನ್ನು ರಕ್ಷಿಸಬೇಕಾದುದು ಸರ್ಕಾರದ ಮತ್ತು ಎಲ್ಲ ಹಿರಿಯರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪೊನ್ನಂಪೇಟೆ ಸಬ್ ಇನ್ಸ್ ಪೆಕ್ಟರ್ ಕುಮಾರ್ ಮಾತನಾಡಿ 18 ರ ವಯಸ್ಸಿನೊಳಗಿನ ವಿದ್ಯಾರ್ಥಿಗಳು ಮೊಬೈಲ್ ಬಳಸುವದು ಅಪರಾಧವಾಗಿದೆ. ಜತೆಗೆ ಹೆಣ್ಣು ಮಕ್ಕಳು ಏಕಾಂಗಿಯಾಗಿ ಸುತ್ತಾಡಬಾರದು. ಬಾಲಕರು ಕೂಡ ಹೆಣ್ಣುಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಪೊಲೀಸ್ ಸಿಬ್ಬಂದಿ ಹೇಮಲತಾ, ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಮಾತನಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ಶಿಕ್ಷಕರಾದ ಎಂ.ಪಿ. ರಾಘವೇಂದ್ರ, ಜಯಣ್ಣ, ಪಿ.ಎ. ಪ್ರಭುಕುಮಾರ್ ಬಾಳೆಲೆ ಪೊಲೀಸ್ ಸಿಬ್ಬಂದಿ ಸಾದಿಲಿ ಹಾಜರಿದ್ದರು.
ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಸಲಾಯಿತು. ಮೆರವಣಿಗೆಯಲ್ಲಿ ಮೊಳಗಿದ 'ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ, 18 ರೊಳಗೆ ಕೊರಳಿಗೆ ತಾಳಿ ಬೀಳದಿರಲಿ, ಬಾಲ್ಯ ವಿವಾಹ ನಡೆಯದಿರಲಿ' ಎಂಬ ಘೋಷಣೆಗಳು ಸಾರ್ವಜನಿಕರ ಗಮನಸೆಳೆದವು.