ಪೊನ್ನಂಪೇಟೆ, ಡಿ. 4: ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಯಿಂದ ರೈತರ ಜೀವನ ಅಲ್ಲೋಲ ಕಲ್ಲೋಲವಾಗಿದೆ. ರೈತ ಬೆಳೆದ ಭತ್ತದ ಬೆಳೆಯು ನೀರು ಪಾಲಾಗಿದೆ. ತಾ. 1 ರಂದು ಹೊಡೆದ ಭಾರೀ ಮಳೆಯಿಂದ ಚಿಕ್ಕಮುಂಡೂರು ಗ್ರಾಮದ ಮಾಜಿ ಸೈನಿಕ ಹಾಗೂ ಕೃಷಿಕ ಐನಂಡ ಬೇಬಿ ತಮ್ಮಯ್ಯ ಅಂದಾಜು 10 ಎಕರೆ ಭೂಮಿಯಲ್ಲಿ ಬೆಳೆದ ಭತ್ತದ ಪಸಲು ಕಠಾವು ಮುಗಿದಿದ್ದು ನೀರಿನಲ್ಲಿ ಮುಳುಗಿದೆ.
ಪ್ರಸ್ತುತ ಅವಧಿಗೆ ಕೋಟೂರು ಪ್ರಾಥಮಿಕ ಸಂಘದಿಂದ ರೂ. 2 ಲಕ್ಷ ಬೆಳೆ ಸಾಲ ಪಡೆದು ಆಧುನಿಕ ವ್ಯವಸಾಯ ಕ್ರಮದಂತೆ ಟ್ರ್ಯಾಕ್ಟರ್ ಬಳಸಿ ಉತ್ತಮ ಭತ್ತದ ಬೆಳೆ ಬೆಳೆಯಲಾಗಿತ್ತು. ಇದೀಗ ಸಾಲ ಮರುಪಾವತಿಗೆ ರೈತ ಪರಿತಪಿಸಬೇಕಾದ ಸ್ಥಿತಿ ಒದಗಿದೆ. ಮಾಧ್ಯಮಕ್ಕೆ ಮಾಹಿತಿ ನೀಡಿದ ತಮ್ಮಯ್ಯ ಕೃಷಿ ಇಲಾಖೆ ಖುದ್ದು ಭೇಟಿ ನೀಡಿ ಸರಕಾರಕ್ಕೆ ಬೆಳೆ ನಷ್ಟದ ಮಾಹಿತಿ ನೀಡಿ ಸಹಕಾರಿ ಸಂಘದಿಂದ ಹಾಗೂ ವಾಣಿಜ್ಯ ಬ್ಯಾಂಕುಗಳಿಂದ ರೈತ ಪಡೆದ ಸಾಲವನ್ನು ಮನ್ನಾ ಮಾಡುವಂತಾಗಬೇಕು. ಮುಂದೆ ದನ-ಕರುಗಳಿಗೆ ಮೇವಿನ ಕೊರತೆ ಹಾಗೂ ಭತ್ತದ ಬೀಜದ ಕೊರತೆ ಉಂಟಾಗಲಿದ್ದು, ಸರಕಾರ ರೈತರ ಕಷ್ಟಕ್ಕೆ ಸ್ಪಂದಿಸಿದಲ್ಲಿ ಮಾತ್ರ ರೈತ ಕೃಷಿಕನಾಗಿ ಉಳಿಯಲು ಸಾಧ್ಯ ಎಂದು ನೊಂದು ನುಡಿದರು.