ಮಡಿಕೇರಿ, ಡಿ. 4: ಚೆಟ್ಟಳ್ಳಿ ಸಮೀಪದ ಕಂಡಕರೆಯ ಎವರ್ಶೈನ್ ಯೂತ್ ಕ್ಲಬ್ ಕಂಡಕರೆ ಇವರ ವತಿಯಿಂದ ಕಂಡಕರೆ ಮೈದಾನದಲ್ಲಿ ನಡೆದ ಅಂಡರ್ 19 ಕಾಲ್ಚೆಂಡು ಪಂದ್ಯಾಟದಲ್ಲಿ ಆತಿಥೇಯ ಎವರ್ಶೈನ್ ಯೂತ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಎವರ್ಶೈನ್ ಯೂತ್ ಕ್ಲಬ್ ಹಾಗೂ ಅಮಿಟಿ ಯುನೈಟೆಡ್ ಗದ್ದೆಹಳ್ಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯಾಟದಲ್ಲಿ ಎರಡು ತಂಡಗಳು ಪ್ರಥಮ ಹಾಗೂ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ವಿಫಲಾರಾಗಿದ್ದರು.

ಪೆನಾಲ್ಟಿ ಶೂಟೌಟ್‍ನಲ್ಲಿ ಎವರ್ಶೈನ್ ತಂಡವು 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪ್ರಶಸ್ತಿ ಪಡೆದರೆ, ಅಮಿಟಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಅಮಿಟಿ ಯುನೈಟೆಡ್ ಗದ್ದೆಹಳ್ಳ ಹಾಗೂ ಸಿ.ಆರ್ ಸೆವೆನ್ ತಂಡಗಳ ನಡುವೆ ನಡೆಯಿತು. ಅಮಿಟಿ ತಂಡವು 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಎರಡನೇ ಸೆಮಿಫೈನಲ್ ಪಂದ್ಯವು ಆತಿಥೇಯ ಎವರ್ಶೈನ್ ಯೂತ್ ಕ್ಲಬ್ ಹಾಗೂ ಯುನೈಟೆಡ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು. ಪೆನಾಲ್ಟಿ ಶೂಟೌಟ್‍ನಲ್ಲಿ 4-2 ಗೋಲುಗಳ ಅಂತರದಿಂದ ಎವರ್ಶೈನ್ ತಂಡವು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಪಂದ್ಯಾಟದ ಅತ್ಯುತ್ತಮ ಆಟಗಾರ ಅಮಿಟಿ ತಂಡದ ಇರ್ಷಾದ್, ಅತ್ಯುತ್ತಮ ಗೋಲ್ ಕೀಪರ್ ಯೂನಿರ್ವಸಲ್ ರಂಗಸಮುದ್ರ ತಂಡದ ಮುಬಶ್ಶಿರ್, ಅತ್ಯುತ್ತಮ ಡಿಫೆಂಡರ್ ರಂಗ ಸಮುದ್ರ ತಂಡದ ಅಭಿಷೇಕ್, ಅತ್ಯುತ್ತಮ ತಂಡ ಯುನೈಟೆಡ್ ಅಮ್ಮತ್ತಿ ಹಾಗೂ ಟಾಪ್ ಸ್ಕೋರರ್ ಪ್ರಶಸ್ತಿಯನ್ನು ಎವರ್ಶೈನ್ ಬಿ ತಂಡದ ಸಾದಾತ್ ಪಡೆದುಕೊಂಡರು.

ಪಂದ್ಯಾಟದ ತೀರ್ಪುಗಾರರಾಗಿ ಷರೀಫ್, ಇಬ್ರಾಹಿಂ ,ಜಂಶಾದ್, ಆಲಿ, ಫಾರೂಖ್ ಹಾಗೂ ಮುಬಶೀರ್ ಕಾರ್ಯನಿರ್ವಹಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ಆಟೋ ಚಾಲಕ ಚಂದ್ರ, ನಿಸಾಮ್, ನೌಫಲ್ ಗದ್ದೆಹಳ್ಳ ಇದ್ದರು.