ಕೂಡಿಗೆ, ಡಿ. 4: ಕೂಡಿಗೆ ಗ್ರಾಮ ಪಂಚಾಯಿತಿಯ ಹುದುಗೂರು ಮತ್ತು ಬ್ಯಾಡಗೊಟ್ಟ ಗ್ರಾಮದ ಹಂಚಿಕೆಗಾಗಿ ನಿವೇಶನ ರಹಿತರ ಆಯ್ಕೆ ಮಾಡಲು ಇಂದು ವಿಶೇಷ ಗ್ರಾಮಸಭೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಹುದುಗೂರು ಗ್ರಾಮದಲ್ಲಿ ಕಾದಿರಿಸಿರುವ ಜಾಗವು ಈಗಾಗಲೇ ಹಾರಂಗಿ ನದಿ ಸಮೀಪವಿದ್ದು, ನದಿಯ ನೀರು ಹೆಚ್ಚಿದಾಗ ಆ ಪ್ರದೇಶವು ನೀರಿನಿಂದ ಮುಳುಗಡೆ ಯಾಗುತ್ತದೆ.

ಈ ಮುಳುಗಡೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲು ಮುಂದಾಗಿರುವ ಗ್ರಾಮ ಪಂಚಾಯಿತಿಯ ವಿರುದ್ಧ ಹುದುಗೂರಿನ 50ಕ್ಕೂ ಹೆಚ್ಚು ಗ್ರಾಮಸ್ಥರು ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ, ಈ ಜಾಗದಲ್ಲಿ ನಿವೇಶನ ನೀಡುವ ಬದಲು ಬೇರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರಾದ ಚಿಣ್ಣಪ್ಪ, ಕೆ.ಟಿ. ಗಿರೀಶ್, ಪ್ರತಾಪ್, ಜನಾರ್ಧನ್, ಮಧು, ಕಾಳಪ್ಪ, ಧನಂಜಯ್ ಸೇರಿದಂತೆ 50ಕ್ಕೂ ಹೆಚ್ಚು ಜನರು ಒತ್ತಾಯಿಸಿದರು.

150 ನಿವೇಶನ ರಹಿತರ ಆಯ್ಕೆಯು ಗ್ರಾಮ ಸಭೆ ಮತ್ತು ವಾರ್ಡ್ ಸಭೆಯ ಆಧಾರದಲ್ಲಿ ನಡೆದಿದೆ ಎಂದು ಪಟ್ಟಿಯನ್ನು ಸಭೆಯಲ್ಲಿ ಓದಿದಾಗ ಸಭೆಯಲ್ಲಿದ್ದ ಅನೇಕರು ಆಯ್ಕೆ ಪಟ್ಟಿಯನ್ನು ವಿರೋಧಿಸಿ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಈಗಾಗಲೇ ಮನೆ ಇರುವವರ ಹೆಸರೂ ಕೂಡ ನಿವೇಶನ ರಹಿತರ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ಹೊರ ಜಿಲ್ಲೆಯಿಂದ ಇಲ್ಲಿಗೆ ಕಾರ್ಮಿಕರಾಗಿ ಬಂದು, ಒಂದೆರಡು ವರ್ಷಗಳು ಬಾಡಿಗೆ ಮನೆಯಲ್ಲಿದ್ದವರು ಸಹ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದ ವಾಸವಿರುವ ಕಡುಬಡವರಿಗೆ ಹಾಗೂ ಸ್ಥಳೀಯರಿಗೆ ಆಧ್ಯತೆ ನೀಡದ ಬಗ್ಗೆ ಸ್ಥಳೀಯರಾದ ಮಂಜುನಾಥ್, ಬೊಮ್ಮೇಗೌಡನ ಚಿಣ್ಣಪ್ಪ, ಕೃಷ್ಣ, ಜಯಣ್ಣ ಮೊದಲಾದವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಿವೇಶನ ಹಂಚಿಕೆಯಲ್ಲಿ ಭಾರಿ ಅನ್ಯಾಯವೆಸಗಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡುವದಾಗಿ ಸಭೆಯಲ್ಲಿ ತಿಳಿಸಿ, ನಂತರ ಸುದ್ದಿಗಾರರೊಂದಿಗೂ ಗ್ರಾಮಸ್ಥರು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಮಾತನಾಡಿ, ನಿವೇಶನ ರಹಿತರ ಆಯ್ಕೆ ಪಟ್ಟಿಯಲ್ಲಿ 125 ಮಂದಿ ಹೆಸರು ಇದ್ದು, ತಮ್ಮ ಸೂಚನೆಯ ಮೇರೆಗೆ ಕೂಲಂಕಶವಾಗಿ ಪರಿಶೀಲಿಸಿ ಸ್ಥಳೀಯರಿಗೆ ಹಾಗೂ ಕಡುಬಡವರಿಗೆ ಮೊದಲ ಆಧ್ಯತೆ ನೀಡಲಾಗುವದು.

ಆಯ್ಕೆ ಪಟ್ಟಿಯಲ್ಲಿ ಹೊರ ಜಿಲ್ಲೆಯವರ ಹೆಸರೂ ಕೂಡ ಸೇರಿದೆ ಎಂಬ ಗ್ರಾಮಸ್ಥರ ಹೇಳಿಕೆಯ ಕುರಿತು ಮಾತನಾಡಿ, ಫಲಾನುಭವಿ ಸ್ಥಳೀಯರಾಗದಿದ್ದಲ್ಲಿ ಅವರವರ ಜಿಲ್ಲೆಯ ಗ್ರಾಮಗಳವರೆಯೇ ಎಂದು ಖಚಿತಪಡಿಸಿಕೊಂಡು, ಅಲ್ಲಿನ ಗ್ರಾಮ ಪಂಚಾಯ್ತಿಗಳಿಂದ ಅನುಮತಿ ಪತ್ರ ಪಡೆದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿದ್ದ ನಿವೇಶನ ಹಂಚಿಕೆ ಕುರಿತಾಗಿ ಸರ್ಕಾರದಿಂದ ಜಾಗ ಗುರುತಿಸಿರುವದರಿಂದ ನಿವೇಶನ ರಹಿತರಿಗೆ ನಿಯಮಾನುಸಾರವಾಗಿ ನಿವೇಶನ ರಹಿತರಿಗೆ ನೀಡಲು ಪ್ರಯತ್ನಿಸಲಾಗುವದು ಎಂದರು.

ನೋಡಲ್ ಅಧಿಕಾರಿಗಳಾಗಿ ಸಹಾಯಕ ಕೃಷಿ ಅಧಿಕಾರಿ ಪೂಣಚ್ಚ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಸರ್ವ ಸದಸ್ಯರು ಹಾಗೂ ಕಾರ್ಯದರ್ಶಿ ಶಿಲ್ಪ ಇದ್ದರು.