ನವದೆಹಲಿ, ಡಿ. 5: 2020 ಆರ್ಥಿಕ ಸಾಲಿನ ಏಪ್ರಿಲ್ ತಿಂಗಳಿ ನಿಂದ ಆಗಸ್ಟ್ ತಿಂಗಳವರೆಗೆ ಅಂದಾಜು 10,990 ಟನ್ ಕರಿಮೆಣಸು ಭಾರತಕ್ಕೆ ಆಮದಾಗಿರುತ್ತದೆ. ಇದರಲ್ಲಿ ವಿಯಟ್ನಾಂ ನಿಂದ 6657 ಟನ್, ಶ್ರೀಲಂಕಾದಿಂದ 2003 ಟನ್ ಹಾಗೂ ಇಂಡೋನೇಷಿ ಯಾದಿಂದ 1034 ಟನ್ಗಳು ಆಮದಾಗಿದೆ. ಕೇಂದ್ರ ವಾಣಿಜ್ಯ ಸಚಿವ ಪಿಯೊಷ್ ಗೋಯೆಲ್ ಈ ಬಗ್ಗೆ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಮಾಗುಂಟ ಶ್ರೀವಾಸಲು ರೆಡ್ಡಿ ಅವರಿಗೆ ಲಿಖಿತ ರೂಪದಲ್ಲಿ ನೀಡಿದ ಮಾಹಿತಿಯಲ್ಲಿ ಕಳೆದ ಮೂರು ಸಾಲಿನಲ್ಲಿ ಹಾಗೂ ಈ ಸಾಲಿನ ಮೊದಲನೇ 5 ತಿಂಗಳಲ್ಲಿ ಕರಿಮೆಣಸು ಆಮದಾದ ವಿವರ ಹೀಗಿದೆ.
2016-17ನೇ ಸಾಲಿನಲ್ಲಿ 20,265 ಟನ್ಗಳು, 2017-18ನೇ ಸಾಲಿನಲ್ಲಿ 29,650 ಟನ್ಗಳು ಹಾಗೂ 2018-19ರಲ್ಲಿ 24,950 ಟನ್ಗಳಷ್ಟು ಕರಿಮೆಣಸು ಆಮದಾಗಿರುತ್ತದೆ.ನೇಪಾಳ ಹಾಗೂ ಬಾಂಗ್ಲಾದೇಶದ ಗಡಿಭಾಗಗಳಿಂದ ಭಾರತಕ್ಕೆ ಅಕ್ರಮವಾಗಿ ಕಡಿಮೆ ದರದ ಕರಿಮೆಣಸು ಸಾಗಾಟ ಕಂಡುಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಜಾಗರೂಕವಾಗಿರಲು ಕೋರಿ ಕಳಪೆ ಮಟ್ಟದ ಕರಿಮೆಣಸು ದೇಶಕ್ಕೆ ಸಾಗಾಟವಾಗುವದನ್ನು ನಿಯಂತ್ರಿಸಲು ಎಚ್ಚರ ವಹಿಸಲಾಗಿದೆ ಎಂದು ಗೋಯೆಲ್ ತಿಳಿಸಿದ್ದಾರೆ.ಭಾರತ ಸರಕಾರದ ಕೋರಿಕೆ ಮೇರೆಗೆ ಶ್ರೀಲಂಕಾದ ಅಧಿಕಾರಿಗಳು ಭಾರತಕ್ಕೆ ರವಾನೆಯಾಗುವ ಕರಿಮೆಣಸನ್ನು ನಿಯಂತ್ರಿಸಲು ದೃಢೀಕರಣ ಪತ್ರ ನೀಡುವಿಕೆಗೆ ಹೊಸ ಕ್ರಮವನ್ನು ಜಾರಿಗೊಳಿಸಿದ್ದಾರೆ. ಅಲ್ಲದೆ ಭಾರತ-ಶ್ರೀಲಂಕಾ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ‘ಸಾಫ್ತಾ’ ಅನ್ವಯ ರಫ್ತು ವ್ಯವಹಾರದ ದೃಢೀಕರಣ ಪತ್ರಗಳ ಪ್ರತಿಗಳನ್ನು ಗಮನಿಸುವದಕ್ಕೆ ಭಾರತೀಯ ಅಧಿಕಾರಿಗಳಿಗೆ ಶ್ರೀಲಂಕಾದ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಬೇರೆ ದೇಶಗಳಿಂದ ಕರಿಮೆಣಸು ಮತ್ತು ಸಾಂಬಾರ ಪದಾರ್ಥಗಳನ್ನು ಆಮದು ಮಾಡಿ ಶ್ರೀಲಂಕಾದಿಂದ ಭಾರತಕ್ಕೆ ಪುನರ್ ರಫ್ತು ಮಾಡಲು ಆಸ್ಪದವಾಗದಂತೆ ಈ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಗೋಯೆಲ್ ತಿಳಿಸಿದ್ದಾರೆ.