ನವದೆಹಲಿ, ಡಿ. 5: ದೇಶದಲ್ಲಿ ಓರ್ವ ವ್ಯಕ್ತಿ ಒಂದು ಕೋವಿಯನ್ನು ಮಾತ್ರ ಅಧಿಕೃತವಾಗಿ ಬಳಸಲು ಪರವಾನಗಿ ಪಡೆದುಕೊಳ್ಳಬಹುದು ಹಾಗೂ ಕೋವಿ ಬಳಕೆ ಸಂದರ್ಭ ಲೋಪ ಉಂಟಾದರೆ ದೀರ್ಘ ಕಾಲದ ಶಿಕ್ಷೆ ಮತ್ತು ದಂಡ ವಿಧಿಸುವಿಕೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿ ಮಸೂದೆಯೊಂದನ್ನು ಅಂಗೀಕರಿಸಿ ಜಾರಿಗೊಳಿಸಲು ಸಿದ್ಧತೆ ನಡೆಸಿತ್ತು. ಆದರೆ ಈ ಬಗ್ಗೆ ಉನ್ನತ ವಲಯದಲ್ಲಿ ಕಂಡುಬಂದ ತೀವ್ರ ವಿರೋಧದ ಕಾರಣದಿಂದಾಗಿ ಸಂಸತ್‍ನಲ್ಲಿ ವಿಧೇಯಕ ಮಂಡಿಸಲು ನಿಗದಿಗೊಳಿಸಲಾಗಿದ್ದ ಪಟ್ಟಿಯಿಂದ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರವು ತಾತ್ಕಾಲಿಕವಾಗಿ ಕೈ ಬಿಟ್ಟಿದೆ. ಈ ಕುರಿತಾಗಿ ದೀರ್ಘ ಸಮಾಲೋಚನೆ ಹಾಗೂ ಮರುಪರಿಶೀಲನೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ.

ಈ ಬಗ್ಗೆ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲ ಐತಿಚಂಡ ದೇವಯ್ಯ ಅವರು ‘ಶಕ್ತಿ’ಗೆ ಅಧಿಕೃತ ಮಾಹಿತಿ ಒದಗಿಸಿದ್ದಾರೆ. ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಷಾ ಅವರಿಗೆ ಕೆಲವು ಸಂಸದರು, ಉದ್ಯಮಿಗಳು, ವೃತ್ತಿಪರರು ಸೇರಿದಂತೆ ಅನೇಕ ಗಣ್ಯರು ಸಲ್ಲಿಸಿರುವ ಮನವಿಯನ್ನು ಈ ತಿದ್ದುಪಡಿಯಿಂದ ಉಂಟಾಗಬಹುದಾದ ತೊಂದರೆಗಳ ಕುರಿತು ವಿವರಿಸಿದ್ದಾರೆ.ಒಂದಕ್ಕಿಂತ ಅಧಿಕ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ಪೈಕಿ ದೇಶದ ವೃತ್ತಿಪರರು, ವೈದ್ಯರು, ವಕೀಲರು, ವ್ಯಾಪಾರಿಗಳು, ಮಾಜಿ ಸಂಸದರು, ಶಾಸಕರು, ಸರ್ಕಾರಿ ಅಧಿಕಾರಿಗಳು, ರಕ್ಷಣಾ ಅಧಿಕಾರಿಗಳು, ಕ್ರೀಡಾ ವಿಭಾಗದ ಶೂಟರ್‍ಗಳು ಸೇರಿದ್ದಾರೆ.

(ಮೊದಲ ಪುಟದಿಂದ) ª ಇವರೆಲ್ಲಾ ಕ್ರಿಮಿನಲ್‍ಗಳಲ್ಲ ಅಥವಾ ಕ್ರಿಮಿನಲ್ ಪ್ರಕರಣಗಳಿಗೆ ತಮ್ಮ ಶಸ್ತ್ರಾಸ್ತ್ರ ಬಳಸುವದಿಲ್ಲ. ಅನೇಕರು ಈ ಪೈಕಿ ರಾಷ್ಟ್ರದ ಸುಭದ್ರತೆಯ ಕಾರ್ಯದಲ್ಲಿ ತೊಡಗಿಸಿಕೊಂಡವರೂ ಇದ್ದಾರೆ.

ಇದೇ ರೀತಿ ಆಹಿರ್‍ಗಳು, ದೋಗ್ರಾ, ಜ್ಯಾಟ್‍ಗಳು, ರಜಪೂತರು, ಸಿಖ್ಖರು ಮೊದಲಾದ ಸಮುದಾಯದವರ ಸಾಂಸ್ಕøತಿಕ ಪ್ರಾಮುಖ್ಯತೆಯೊಂದಿಗೆ ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಇವರ ಪೈಕಿ ದೇಶದ ಬೆನ್ನೆಲುಬಾಗಿ ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರೂ ಇದ್ದಾರೆ. ತಲತಲಾಂತರ ದಿಂದ ಈ ಹಕ್ಕನ್ನು ಅನುಭವಿಸಿಕೊಂಡು ಬಂದವರೂ ಇದ್ದಾರೆ. ದೇಶದ ಭದ್ರತೆಯ ಹಿತದೃಷ್ಟಿ ಬಂದಾಗ ಅವರು ದೇಶದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.

ಈ ಸಂದರ್ಭ ಅನವಶ್ಯಕವಾಗಿ ಈ ಶಸ್ತ್ರಾಸ್ತ್ರಗಳನ್ನು ಹೊಂದಿರುವವರಿಂದ ದೇಶದ ಸುಭದ್ರತೆಗೆ ಧಕ್ಕೆಯಾಗುತ್ತದೆ ಎನ್ನುವ ಭಾವನೆ ಸರ್ವಥಾ ಸಲ್ಲದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದುವರೆಗೂ ಅಧಿಕೃತವಾಗಿ ಖಾಸಗಿ ಸ್ವತ್ತಾಗಿ ಕಾಪಾಡಿಕೊಂಡು ಬಂದ ಈ ಹಕ್ಕನ್ನು ತಲತಲಾಂತರದಿಂದ ಬಂದ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವದು ದುರಂತದ ತೀರ್ಮಾನವಾಗುತ್ತದೆ. ಕ್ರೀಡಾಲೋಕದಲ್ಲಿಯೂ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪದಕಗಳನ್ನು ತಂದು ಕೊಡುತ್ತಿರುವಂತಹ ಒಲಿಂಪಿಕ್‍ನಲ್ಲಿಯೂ ಸಾಧನೆಗೈಯುತ್ತಿರುವಂತಹ ಕ್ರೀಡಾಪಟುಗಳಿಗೂ ಇದರಿಂದ ಅವಮಾನ ನಿರುತ್ಸಾಹ ಉಂಟಾಗುತ್ತದೆ.

ಈ ಹಿಂದೆ ಅನೇಕ ಕಡೆ ವಿಶೇಷ ಸವಲತ್ತಿನ ಹಕ್ಕನ್ನು ಅನೇಕರು ಪಡೆದಿದ್ದು, ಅಂತವರಿಗೂ ಇದರಿಂದ ಶಿಕ್ಷೆ ವಿಧಿಸಿದಂತಾಗುತ್ತದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಪುನರ್ ಪರಿಶೀಲಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈಗಾಗಲೇ ಪಂಜಾಬ್ ಸರ್ಕಾರವು ಈ ತಿದ್ದುಪಡಿಯನ್ನು ನೇರವಾಗಿ ತೀವ್ರವಾಗಿ ವಿರೋಧಿಸಿದೆ. ಹರಿಯಾಣ ರೈಫಲ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸಚಿವ ಇಂದರ್‍ಜಿತ್‍ಸಿಂಗ್ ಅವರು ಕೂಡ ಈ ಕುರಿತಾಗಿ ಪುನರ್‍ಪರಿಶೀಲಿಸುವಂತೆ ಗೃಹ ಸಚಿವ ಅಮಿತ್ ಷಾ ಅವರಲ್ಲಿ ಮನವಿ ಮಾಡಿದ್ದು, ಅವರೊಂದಿಗೆ ಖುದ್ದಾಗಿಯೂ ಮಾತನಾಡಿದ್ದಾರೆ. ತಮ್ಮ ಮಾತುಕತೆ ಸಫಲವಾಗುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.