ಸೋಮವಾರಪೇಟೆ, ಡಿ. 5: ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಪಠ್ಯದಿಂದ ಕೈಬಿಡುವಂತೆ ಈಗಾಗಲೇ ಸಂಬಂಧಿಸಿದ ಸಮಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ಇದರಿಂದ ಯಾವದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಸಮಿತಿಯು ವ್ಯತಿರಿಕ್ತ ವರದಿ ನೀಡಿದರೆ ಮತ್ತೊಮ್ಮೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಿತ ಇಲಾಖಾ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಪಠ್ಯದಿಂದ ಟಿಪ್ಪುವಿನ ಚರಿತ್ರೆಯನ್ನು ಕೈಬಿಡುವಂತೆ ಪತ್ರ ಬರೆದ ಹಿನ್ನೆಲೆ ಶಾಸಕ ಅಪ್ಪಚ್ಚು ರಂಜನ್ ಅವರ ಉಪಸ್ಥಿತಿಯಲ್ಲಿ, ಬೆಂಗಳೂರಿನಲ್ಲಿ ಪಠ್ಯಪುಸ್ತಕ ಸಮಿತಿ ಸಭೆ ನಡೆಸಿದ್ದು, ಶಾಸಕರ ಬೇಡಿಕೆಯನ್ನು ಆಲಿಸಲಾಗಿತ್ತು.
ಇದೀಗ ಟಿಪ್ಪುವಿನ ಚರಿತ್ರೆಯನ್ನು ಪಠ್ಯದಲ್ಲಿ ಯಾವದೇ ಬದಲಾವಣೆ ಇಲ್ಲದೇ ಮುಂದುವರೆಸುವಂತೆ ಸಮಿತಿಯು ಸರ್ಕಾರ ಮತ್ತು ಇಲಾಖೆಗೆ ಶಿಫಾರಸ್ಸು ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಶಾಸಕರನ್ನು ‘ಶಕ್ತಿ’ ಸಂಪರ್ಕಿಸಿದ ಸಂದರ್ಭ ಮೇಲಿನಂತೆ ಅಭಿಪ್ರಾಯಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆ ಪಠ್ಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಎರಡು ವರದಿಯನ್ನು ತಂಡ ಸಿದ್ಧಪಡಿಸಿದ್ದು, ತಾ. 6 ರಂದು (ಇಂದು) ಕರ್ನಾಟಕ ಪಠ್ಯಪುಸ್ತಕ ಸೊಸೈಟಿಗೆ ಸಲ್ಲಿಸುವ ನಿರೀಕ್ಷೆಯಿದೆ.