ಮಡಿಕೇರಿ, ಡಿ. 2: ಮಡಿಕೇರಿ ನಗರದ ರಸ್ತೆಗಳು ತೀರಾ ಹದಗೆಟ್ಟಿದ್ದರೂ ನಗರಸಭೆಯ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಟೀಕಿಸಿರುವ ಜಾತ್ಯತೀತ ಜನತಾದಳದ ನಗರ ಮಹಿಳಾ ಘಟಕ, ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿಗಾಗಿ ಹೋರಾಟ ನಡೆಯಬೇಕೆಂದು ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆಯ ಮಾಜಿ ಸದಸ್ಯೆ ಲೀಲಾ ಶೇಷಮ್ಮ ಅವರು, ನಗರದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ಇಲ್ಲಿಯವರೆಗೆ ಅನೇಕ ಪ್ರತಿಭಟನೆಗಳು ನಡೆದಿವೆ. ಆದರೆ ನಗರಸಭೆ ಯಾವದೇ ಕ್ರಮ ಕೈಗೊಳ್ಳದೆ ಇರುವದರಿಂದ ಚೇಂಬರ್ ಆಫ್ ಕಾಮರ್ಸ್ ಪಕ್ಷಾತೀತವಾಗಿ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಹೋರಾಟ ರೂಪಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಪರಿಣಾಮವಾಗಿ ದಸರಾ ಸಂದರ್ಭ ಕೇವಲ ಎಂ ಸ್ಯಾಂಡ್ ಹಾಗೂ ಜಲ್ಲಿ ಹಾಕಿ ಗುಂಡಿಮುಚ್ಚುವ ತೇಪೆ ಕಾರ್ಯ ಮಾಡಲಾಗಿತ್ತು. ಇದೀಗ ಮಳೆ ನಿಂತಿದ್ದರೂ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ.
ಹಾಕಿರುವ ಎಂ ಸ್ಯಾಂಡ್ ಮಾಯವಾಗಿದ್ದು, ಗುಂಡಿಗಳಲ್ಲಿ ಜಲ್ಲಿಕಲ್ಲು ಮಾತ್ರ ನಿಂತು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಳ್ಳುತ್ತಿರುವ ಸನ್ನಿವೇಶಗಳು ಎದುರಾಗಿವೆ ಎಂದು ದೂರಿದರು.
ನಗರದ ಕಾಲೇಜು ರಸ್ತೆಯಿಂದ ಮುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆಯು ಹದಗೆಟ್ಟಿದೆ. ಈ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ, ಕಾಮಗಾರಿ ಇನ್ನೂ ಆರಂಭವಾಗಿಲ್ಲ.
ನಗರದ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಚೇಂಬರ್ ಆಫ್ ಕಾಮರ್ಸ್, ವಾಹನ ಚಾಲಕರ ಸಂಘದವರು ಜಂಟಿ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಸಾರ್ವಜನಿಕರ ನೆರವಿನೊಂದಿಗೆ ಹೋರಾಟ ರೂಪಿಸುವ ಅನಿವಾರ್ಯತೆ ಇದೆ ಎಂದು ಲೀಲಾಶೇಷಮ್ಮ ಹೇಳಿದರು.
ನಿರ್ಭಯ ಪ್ರಕರಣದ ಬಳಿಕ ಅತ್ಯಾಚಾರಿಗಳ ವಿರುದ್ಧ ಹಲವು ನಿಯಮಗಳನ್ನು ರೂಪಿಸಿದ್ದರೂ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಮತ್ತೆಮತ್ತೆ ಮರುಕಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಲೀಲಾ ಶೇಷಮ್ಮ, ಹೈದರಾಬಾದ್‍ನಲ್ಲಿ ಪಶು ವೈದ್ಯೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯನ್ನು ಸುಟ್ಟು ಹಾಕಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಘಟನೆಯಲ್ಲಿ ಭಾಗಿಯಾಗುವ ಆರೋಪಿಗಳಿಗೆ ಯಾರು ಕೂಡಾ ಜಾಮೀನು ನೀಡಬಾರದು. ಅಲ್ಲದೆ ಅಂತಹವರಿಗೆ ಮರಣದಂಡನೆಯನ್ನೇ ವಿಧಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಪ್ರಧಾನ ಕಾರ್ಯದರ್ಶಿ ಜೆಸಿಂತಾ ಹೂವಲ್ಲಿ, ಉಪಾಧ್ಯಕ್ಷೆ ಎನ್.ಸಿ. ಮಮತಾ ಹಾಗೂ ಸದಸ್ಯೆ ಎಲ್ಸಿ ಬೇಬಿ ಉಪಸ್ಥಿತರಿದ್ದರು.