ಕೂಡಿಗೆ, ಡಿ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳದ ಸಮಸ್ಯೆ ಎದುರಾಗಿ ಜಿಲ್ಲಾ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 5/1ಪಿ2ನಲ್ಲಿ ಎರಡು ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯವರು ಗುರುತಿಸಿ ಕೊಟ್ಟಿರುವ ಹಿನ್ನೆಲೆಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಕಸ ವಿಲೇವಾರಿ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ.

ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ. ಈಗಾಗಲೇ ರೂ. 10 ಲಕ್ಷದಲ್ಲಿ ಸುಸಜ್ಜಿತ ಯಂತ್ರೋಪಕರಣಗಳನ್ನು ಇರಿಸುವ ಕಟ್ಟಡ ಕಾಮಗಾರಿಯು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಆಧುನಿಕ ಕಸ ನಿರ್ವಹಣಾ ಯಂತ್ರೋಪಕರಣಗಳನ್ನು ಅಳವಡಿಸಿ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಎರಡು ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕದ ಪಕ್ಕದಲ್ಲಿ ಸ್ಮಶಾನ ಜಾಗವನ್ನು ಕಾದಿರಿಸಿದ್ದು, ಶವಗಳನ್ನು ಸುಡುವ ಘಟಕವನ್ನು ಪ್ರಾರಂಭಿಸುವ ಚಿಂತನೆ ನಡೆಸಲಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಸರ್ಕಾರದಿಂದ ಬಿಡುಗಡೆಗೊಂಡ ರೂ. 10 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಮುಗಿಯುವ ಹಂತದಲ್ಲಿದೆ. ಮುಂದಿನ ಯೋಜನೆಯಂತೆ ರೂ. 10 ಲಕ್ಷಗಳನ್ನು ಸರ್ಕಾರ ಮಂಜೂರು ಮಾಡಲಿದ್ದು, ಆ ಹಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಸ ನಿರ್ವಹಣಾ ಯಂತ್ರಗಳನ್ನು ಖರೀದಿಸಿ ಅಳವಡಿಸಲಾಗುವದು. ಅಲ್ಲದೆ, ಕಸ ವಿಲೇವಾರಿ ಘಟಕದಲ್ಲಿ ಒಣಕಸ, ಹಸಿ ಕಸಗಳನ್ನು ಬೇರ್ಪಡಿಸಿ, ಗೊಬ್ಬರ ಮಾಡುವದು ಮತ್ತು ಯಾವದೇ ದುರ್ವಾಸನೆ ಬಾರದ ರೀತಿಯಲ್ಲಿ ಹಾಗೂ ಸ್ಥಳೀಯರಿಗೆ ರೋಗ ರುಜಿನಗಳು ಹರಡದಂತೆ ನಿಗಾ ವಹಿಸಲಾಗುವದು ಹಾಗೂ ರೋಗ ನಿರೋಧಕ ಔಷಧಿಗಳ ಸಿಂಪಡಣೆ ಕಾರ್ಯವನ್ನು ಮಾಡಲಾಗುವದು. ಕಸ ವಿಲೇವಾರಿ ಘಟಕದ ಪಕ್ಕದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದೆ. ರೂ. 3.5 ಲಕ್ಷದಲ್ಲಿ ಮುಳ್ಳುಸೋಗೆ ಗ್ರಾ.ಪಂ. ಅನುದಾನದಲ್ಲಿ ಶವ ಸುಡುವ ಘಟಕವನ್ನು ಪ್ರಾರಂಭಿಸಲಾಗುವದು ಎಂದು ತಿಳಿಸಿದರು.