ಸೋಮವಾರಪೇಟೆ, ಡಿ. 2: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಗಂ ದೂರು ಕೋವೇರ ಕುಟುಂಬಸ್ಥರ ಮನೆಗಳಿಂದ ಸೇನೇರ ಕುಟುಂಬಸ್ಥರ ಮನೆಗಳಿಗಾಗಿ ಹಾದು ಹೋಗುವ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಇಲಾಖೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಐಗೂರು-ಕಿರಗಂದೂರು-ತಾಕೇರಿ ಗ್ರಾಮಗಳ ಸಂಪರ್ಕ ರಸ್ತೆಯು ಸುಮಾರು 2 ಕಿ.ಮೀ. ತೀರಾ ಹದಗೆಟ್ಟಿದ್ದು ದಶಕಗಳ ಹಿಂದೆ ನಿರ್ಮಾಣ ಮಾಡಿದ್ದ ಡಾಂಬರು ಕಿತ್ತುಬಂದಿದ್ದು, ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗ್ರಾಮಸ್ಥ ತಿಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ಯಾರಾದರೂ ರೋಗ ಪೀಡಿತರಾದರೆ ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಸಾಗಿಸುವದು ಅಸಾಧ್ಯದ ಮಾತಾಗಿದೆ. ರಸ್ತೆಯ ದುರವಸ್ಥೆಯಿಂದಾಗಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆ ಯುಂಟಾಗಿದ್ದು, ತಕ್ಷಣ ಮರುಡಾಂಬ ರೀಕರಣ ಅಥವಾ ಕಾಂಕ್ರೀಟೀ ಕರಣಗೊಳಿಸಲು ಸಂಬಂಧಿಸಿದ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಭಿಯಂತರರು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿ.ಪಂ. ಅಭಿಯಂತರ ಟಿ.ಪಿ. ವೀರೇಂದ್ರ ಅವರು, ಸಂಬಂಧಿಸಿದ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಅಗತ್ಯ ಕ್ರಮ ವಹಿಸುವದಾಗಿ ಭರವಸೆ ನೀಡಿದ್ದಾರೆ.