ಶನಿವಾರಸಂತೆ, ಡಿ. 2: ಬೆಂಗಳೂರಿನ ದಕ್ಷಿಣ ವಲಯದ ಭೂ ದಾಖಲಾತಿಗಳ ಇಲಾಖೆಯ ಜಂಟಿ ನಿರ್ದೇಶಕ ಜಯಪ್ರಕಾಶ್ ಅವರು ಅನ್ಯ ಪ್ರಕರಣದ ಸ್ಥಳ ಪರಿಶೀಲನೆಗಾಗಿ ಆಗಮಿಸಿದ್ದು ಶನಿವಾರಸಂತೆಯ ಹಿರಿಯ ನಾಗರಿಕರು, ಗ್ರಾಮ ಪಂಚಾಯಿತಿ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಕೋರಿಕೆ ಮೇರೆಗೆ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಅಹವಾಲುಗಳಿಗೆ ಸ್ಪಂದಿಸಿ ಪರಿಹಾರ ಮಾರ್ಗವನ್ನು ಸೂಚಿಸಿದರು.

ಪಟ್ಟಣದಲ್ಲಿ ಭೂ ಮಾಪನಾ ಇಲಾಖೆಯು 2006 ರಲ್ಲಿ ನಗರ ಮಾಪನ ಮಾಡಲು ಅಧಿಸೂಚನೆ ಹೊರಡಿಸಿತ್ತು. ಸಿಬ್ಬಂದಿಯನ್ನು ನಿಯೋಜಿಸಿ 420 ಎಕರೆ 67 ಸೆಂಟ್ ವಿಸ್ತೀರ್ಣಕ್ಕೆ ಅಧಿಸೂಚನೆ ಹೊರಡಿಸಿತ್ತು. 1330 ಆಸ್ತಿ ಕಾರ್ಡ್ ಗಳನ್ನು ತಯಾರಿಸಿ ಬಹುತೇಕರಿಗೆ ವಿತರಿಸಲಾಗಿದೆ.

ಈ ಸಂದರ್ಭ ಕೆಲವು ಆಸ್ತಿಗಳನ್ನು ಕೈಬಿಡಲಾಗಿದೆ ಎಂಬ ಕಾರಣಕ್ಕೆ 2ನೇ ಬಾರಿಗೆ 2016 ರಲ್ಲಿ ಅಧಿಸೂಚನೆ ಹೊರಡಿಸಿ ನೂರ ಮೂವತ್ತೊಂಭ ತ್ತೂವರೆ ಸೆಂಟ್ ಪ್ರದೇಶಕ್ಕೆ ಅಧಿಸೂಚನೆ ಹೊರಡಿಸಲಾಯಿತು.

ಆದರೆ, ನಂತರ ಮಾಹಿತಿ ಕೊರತೆಯಿಂದಲೋ ಅಥವಾ ಕಾನೂನು ಜ್ಞಾನದ ಕೊರತೆ ಯಿಂದಲೋ ಹಲವು ಸಮಸ್ಯೆಗಳು ಉಲ್ಭಣಗೊಂಡಿತು. ಆಸ್ತಿ ಕಾರ್ಡ್‍ಗಳು ಬಾಕಿ ಉಳಿದವು. ಅತ್ತ ಆರ್.ಟಿ.ಸಿ. ಪದ್ಧತಿ ಅನುಸರಿಸಲಾಗದೇ ಇತ್ತ ಪ್ರಾಪರ್ಟಿ ಕಾರ್ಡ್ ಪಡೆಯಲಾಗದೆ ಆಸ್ತಿ ಹಕ್ಕು ದಾಖಲಾತಿ ಮಾಡಿಸಿ ಕೊಳ್ಳಲಾಗದೆ ತ್ರಿಶಂಕು ಸ್ಥಿತಿಯಲ್ಲಿ ಇರುವದಾಗಿ ಕೆಲ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಹೀಗಾಗಿ ಶನಿವಾರಸಂತೆ ನಗರ ಮಾಪನಾ ಕಚೇರಿಗೆ ಸ್ಥಳ ಮಾಹಿತಿ ಇರುವ ಅನುಭವಿಗಳಾದ ಭೂ ಮಾಪಕರಾದ ಹೆಚ್.ಕೆ. ಮಹಾದೇವಗೌಡ ಹಾಗೂ ನವೀನ್ ಕುಮಾರ್ ಅವರನ್ನು ಅನುಕ್ರಮವಾಗಿ ಪಿರಿಯಾಪಟ್ಟಣ ಹಾಗೂ ಸಕಲೇಶಪುರದಿಂದ ನಿಯೋಜನೆ ಮಾಡಲು ಕೋರಲಾಯಿತು. ಪಂಚಾಯಿತಿ ಕಟ್ಟಡದಲ್ಲೇ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲು ಸಮ್ಮತಿ ಸೂಚಿಸಲಾಯಿತು.

ನಾಗರಿಕರ ಅಹವಾಲುಗಳಿಗೆ ಸ್ಪಂದಿಸಿದ ಜಂಟಿ ನಿರ್ದೇಶಕರು ತಪಾಸಕ ಎಂ.ಎಂ. ಲೋಕನಾಥ್, ಭೂಮಾಪಕ ಮಹಾದೇವ, ಮಾನಸ ಅವರನ್ನು ಶನಿವಾರಸಂತೆಯಲ್ಲಿ ಕಾರ್ಯ ಮತ್ತು ದಾಖಲಾತಿ ನಿರ್ವಹಿಸಲು ಹಾಗೂ ಸ್ಥಳೀಯರಾದ ತಸ್ಮಿಯಾ ಸುಲ್ತಾನ್ ಅವರನ್ನು ಕಚೇರಿ ನಿರ್ವಹಿಸಲು ಆಯುಕ್ತರಿಗೆ ಶಿಫಾರಸ್ಸು ಮಾಡುವದಾಗಿ ತಿಳಿಸಿದರು.

ಭೂ ಉಪ ನಿರ್ದೇಶಕರ ಸಹಿ ಬಾಕಿ ಇದ್ದು ವಿತರಣೆ ಮಾಡಲು ಬಾಕಿ ಇರುವ 153 ಪ್ರಾಪರ್ಟಿ ಕಾರ್ಡ್‍ಗಳನ್ನು ಭೂಮಾಪಕರಿಗೆ ಮಂಡಿಸಲು ಹಾಗೂ ನಿರ್ದಿಷ್ಟ ಪ್ರಕರಣಗಳಿಗೆ ತಾಂತ್ರಿಕ ವಿಷಯಗಳ ಬಗ್ಗೆ ಸ್ಪಷ್ಟೀಕರಣ ಅವಶ್ಯಕತೆಯಿದ್ದಲ್ಲಿ ಅದನ್ನು ಭೂ ದಾಖಲಾತಿಗಳ ಜಂಟಿ ನಿರ್ದೇಶಕರ ಗಮನಕ್ಕೆ ತರುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಭೂಮಾಪನಾ ಇಲಾಖೆ ಹಿರಿಯ ಅಧಿಕಾರಿ ಶ್ಯಾಂಪ್ರಸಾದ್, ಮಹದೇವ್, ಮೇಲ್ವಿಚಾರಕರಾದ ಹರೀಶ್ಚಂದ್ರ, ಲೋಕನಾಥ್, ಪ್ರಮುಖರಾದ ಬಿ.ಟಿ. ರಂಗಸ್ವಾಮಿ, ಆದಿತ್ಯ, ಚೆನ್ನರಾಜು, ಎನ್.ಎಂ. ಮಹೇಶ್, ಎನ್.ಕೆ. ಅಪ್ಪಸ್ವಾಮಿ, ಶರತ್ ಶೇಖರ್, ಅರವಿಂದ್, ಜಗದೀಶ್, ಮೋಹನ್ ಮತ್ತಿತರರು ಹಾಜರಿದ್ದರು.