ಗೋಣಿಕೊಪ್ಪ ವರದಿ, ಡಿ. 2: ಅರಣ್ಯ ರಕ್ಷಣೆಗೆ ಜನಪ್ರತಿನಿಧಿ ಹಾಗೂ ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅರಣ್ಯ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಗಳು ಸಲಹೆಯಿತ್ತರು.

ರಾಜಕೀಯ ಪ್ರಭಾವದಿಂದ ಅರಣ್ಯ ಭೂಮಿಯಲ್ಲಿ ನಡೆಯುತ್ತಿರುವ ಪುನರ್ವಸತಿ ಹಾಗೂ ಅರಣ್ಯೇತರ ಚಟುವಟಿಕೆಗಳಿಂದ ಭವಿಷ್ಯದಲ್ಲಿ ಎದುರಿಸಬೇಕಾದ ಪರಿಸರ ಸಮತೋಲನ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತವಾಯಿತು.

ಅರಣ್ಯ ರಕ್ಷಣೆಗೆ ರಾಜಕೀಯ ವ್ಯಕ್ತಿಗಳು ಮುಂದಾಗಬೇಕಿದೆ. ಪುನರ್ವಸತಿ ಅಥವಾ ಕೃಷಿಗಾಗಿ ಅರಣ್ಯ ನಾಶ ನಡೆಯಬಾರದು ಎಂಬ ಸಂದೇಶ ಸಾರಿದರು.

ಕಾರ್ಯಾಗಾರವನ್ನು ನಿವೃತ್ತ ಅರಣ್ಯಾಧಿಕಾರಿ ಡಾ. ಎಸ್.ಎನ್. ರಾಯ್ ಉದ್ಘಾಟಿಸಿ ಮಾತನಾಡಿ, ಅರಣ್ಯದಲ್ಲಿ ಮರಗಳ ಎಲೆಗಳು ಕೊಳೆತು ಭೂಮಿಯ ಫಲವತ್ತತೆ ಹೆಚ್ಚಿಸುವದರಿಂದ ಇದನ್ನು ನಾವು ರಕ್ಷಿಸಿಕೊಳ್ಳಬೇಕೆಂದರು.

ಭಾರತೀಯ ಅರಣ್ಯ ಸೇವೆ ನಿವೃತ್ತ ಅಧಿಕಾರಿ ಆರ್.ಎನ್. ಪಾಲಣ್ಣ ಮಾತನಾಡಿ, ಅರಣ್ಯದ ಮೂಲಕ ಜಲ ಸಂರಕ್ಷಣೆ ಬಗ್ಗೆ ಶಿಕ್ಷಣ ನೀಡುವ ಅವಶ್ಯಕತೆ ಹೆಚ್ಚಿದೆ.

ನೀರು ಸಂರಕ್ಷಣೆಯ ಪ್ರದೇಶಗಳ ರಕ್ಷಣೆ ಹೆಚ್ಚು ಅಗತ್ಯವಾಗಿದೆ. ಅರಣ್ಯ ರಕ್ಷಣೆಯಲ್ಲಿ ತಕ್ಷಣದ ಪರಿಹಾರ ಮತ್ತು ದೂರ ದೃಷ್ಠಿಯ ಪರಿಹಾರ ಕ್ರಮಗಳನ್ನು ಅರಣ್ಯ ಇಲಾಖೆಗೆ ಬರುವ ಅಧಿಕಾರಿಗಳ ಪಾಲಿಸಬೇಕಿದೆ. ಇದರಿಂದ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂದರು. ನಿವೃತ್ತ ಅರಣ್ಯಾಧಿಕಾರಿ ಬಿ. ಕೆ. ಸಿಂಗ್ ಮಾತನಾಡಿ, ಅಭಿವೃದ್ಧಿ ಕಾಮಗಾರಿ ಯಿಂದ ಅರಣ್ಯಕ್ಕೆ ಪೆಟ್ಟಾಗದಂತೆ ನಾವು ಯೋಜನೆ ರೂಪಿಸಿಕೊಳ್ಳಬೇಕಿದೆ.

ನಿವೃತ್ತ ಅರಣ್ಯಾಧಿಕಾರಿಗಳಾದ ಡಾ. ಕೋಡೀರ ಎ. ಕುಶಾಲಪ್ಪ, ಕೊಡಗು ವೃತ್ತ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಹೀರಲಾಲ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.