ವೀರಾಜಪೇಟೆ, ಡಿ. 2: ಹೆಗ್ಗಳ ಗ್ರಾಮದ ಸುಂದರ ಪ್ರಕೃತಿಯ ಮಡಿಲಿನಲ್ಲಿ 6 ಎಕರೆ ವಿಸ್ತೀರ್ಣದ ಜಾಗದಲ್ಲಿ ಕಡು-ಬಡ ಮಕ್ಕಳ ವಿದ್ಯಾ ಮಂದಿರವಾದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯು 2006-07ರಲ್ಲಿ ಪ್ರಾರಂಭವಾಗಿದ್ದು ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳಲ್ಲೇ ಗಮನಾರ್ಹ ಸಾಧನೆಯನ್ನು ಮಾಡಿದಲ್ಲದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ.

ಕ್ರೀಡಾ ಸಾಧನೆಗೆ ಮುಖ್ಯ ಕಾರಣಕರ್ತರು ಈ ಶಾಲೆಯ ದೈಹಿಕ ಶಿಕ್ಷಕರಾದ ಮಂಜುನಾಥ್ ಮೂಲತಃ ಮೈಸೂರು ಜಿಲ್ಲೆಯ ಹುಣಸೂರಿನವರು. 2008ರಲ್ಲಿ ಸೇವೆಗೆ ಪಾದಾರ್ಪಣೆ ಮಾಡಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ, ವಿಭಾಗೀಯ ಮತ್ತು ಜಿಲ್ಲಾಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರೀಡಾಕೂಟ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಕೂಟ, ದಸರಾ ಕ್ರೀಡಾಕೂಟ, ಮಹಿಳಾ ಕ್ರೀಡಾ ಕೂಟ, ಪ್ರತಿಭಾ ಕಾರಂಜಿ, ರಾಷ್ಟ್ರೀಯ ಹಬ್ಬಗಳ ಪ್ರಯುಕ್ತ ನಡೆಸುವ ರಸ್ತೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಂಸನೀಯ ಮತ್ತು ಗಮನಾರ್ಹವಾದ ಸಾಧನೆ ಗೈದಿದ್ದಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳನ್ನು ಖೋ-ಖೋ, ಕಬಡ್ಡಿ, ಫುಟ್ಬಾಲ್, ಹ್ಯಾಂಡ್‍ಬಾಲ್, ಚೆಸ್, ಥ್ರೋಬಾಲ್, ವಾಲಿಬಾಲ್, ಯೋಗಾಸನ, ಓಟದ ಸ್ಪರ್ಧೆಗಳಲ್ಲಿ ತರಬೇತಿಯನ್ನು ನೀಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲಾಮಟ್ಟದ ಫೈಕಾ ಕ್ರೀಡಾಕೂಟದ ಮೇಲಾಟದಲ್ಲಿ ಕ್ಲೀನ್‍ಸ್ವಿಪ್ ಮಾಡಿದ ಹೊಸ ದಾಖಲೆ ಇವರದ್ದು. ಇವರ ಮಾರ್ಗದರ್ಶನ ಪಡೆದ ಕೆ.ವಿ. ಮೇರಿ ಎಂಬ ವಿದ್ಯಾರ್ಥಿನಿ ಶಿವಮೊಗ್ಗದಲ್ಲಿ ನಡೆದ ಮಹಿಳಾ ಕ್ರೀಡಾಕೂಟದಲ್ಲಿ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಜೇಶ್ವರಿ ಎಂಬ ವಿದ್ಯಾರ್ಥಿಯು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಪಟ್ಟಗಿಟ್ಟಿಸಿದ್ದಾರೆ. ಸತತವಾಗಿ 2 ವರ್ಷ ಇದೇ ವಿದ್ಯಾರ್ಥಿಗಳು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮಂಜುನಾಥ್ ಚದುರಂಗದ ಮಾರ್ಗದರ್ಶನ ಸಹ ನೀಡುತ್ತಿದ್ದು, ವಿದ್ಯಾರ್ಥಿಗಳಾದ ಕಿಶೋರ್, ಪ್ರಕಾಶ್ ಮತ್ತು ಅಜಿತ್ ಚದುರಂಗದಲ್ಲಿ ಜಿಲ್ಲಾ ಮಟ್ಟದಲ್ಲೇ ಪ್ರಥಮ ಸ್ಥಾನಪಡೆದು ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿಶಾಲಾಕ್ಷಿ ಎಂಬ ವಿದ್ಯಾರ್ಥಿಯು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ 3000 ಮೀಟರ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ವಿದ್ಯಾರ್ಥಿನಿ ವಿಭಾಗೀಯ ಮಟ್ಟದ ಫೈಕಾ ಕ್ರೀಡಾಕೂಟದ ಖೋ-ಖೋ ಸ್ಪರ್ಧೆಯಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ.

2010-11ರಲ್ಲಿ ಮೇಲಾಟಗಳ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಲು ಪ್ರಾರಂಭಿಸಿದ ಹೆಗ್ಗಳ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾಕೂಟದ ಮೇಲಾಟದಲ್ಲಿ ಚಾಂಪಿಯನ್ ಶಿಪ್‍ನ್ನು ಪಡೆದು ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.

ವಲಯಮಟ್ಟದ ಕ್ರೀಡಾಕೂಟ, ತಾಲೂಕು ಮಟ್ಟದ ಕ್ರೀಡಾಕೂಟದಲ್ಲೂ ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ ಟ್ರೋಫಿ ಪಡೆದು ಇತ್ತೀಚಿಗೆ ಪದ್ಮಶ್ರೀ ಎಂಬ ವಿದ್ಯಾರ್ಥಿನಿಯು 800 ಮೀ. ಓಟದ ಸ್ಪರ್ಧೆಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.

ವಿದ್ಯಾರ್ಥಿಗಳು ಈ ರೀತಿಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವದಕ್ಕೆ ಶಿಕ್ಷಕರಾದ ಮಂಜುನಾಥ್ ಅವರ ಪಾತ್ರ ಅಪಾರವಾಗಿದೆ. ಅವರ ಮಾರ್ಗದರ್ಶನ, ಶ್ರಮ, ಸಂಸ್ಥೆಯ ಮೇಲಿರುವ ಕಾಳಜಿ, ವಿದ್ಯಾರ್ಥಿಗಳ ಮೇಲಿನ ಪ್ರೀತಿಯು ಇದಕ್ಕೆ ಕಾರಣವಾಗಿದೆ. ಒಂದೆಡೆ ವಿದ್ಯಾರ್ಥಿಗಳ ಸಾಧನೆಯಾದರೆ ಮಂಜುನಾಥ್ ಅವರು ವೈಯಕ್ತಿಕ ಸಾಧನೆಯನ್ನು ಮಾಡಿದ್ದಾರೆ. ಯೋಗಾಸನ, ವಾಲಿಬಾಲ್, ಕಬಡ್ಡಿ , ಖೊ-ಖೋ, ಅಥ್ಲೆಟಿಕ್ ಕ್ರೀಡೆಗಳ ರಾಜ್ಯಮಟ್ಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಹಾಕಿ ಮತ್ತು ಓಟದ ಸ್ಪರ್ಧೆಗಳಲ್ಲಿ, ಜಿಲ್ಲಾಮಟ್ಟದಲ್ಲಿ ಹಲವಾರು ವರ್ಷ ಫ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕಬಡ್ಡಿ ಹಾಗೂ ಇನ್ನಿತರ ಹಲವಾರು ಪಂದ್ಯಾವಳಿಯಲ್ಲಿ ವಿಜೇತರಾಗಿದ್ದು, ಸ್ಥಳೀಯ ತಂಡವನ್ನು ಸಹ ತಯಾರು ಮಾಡುತ್ತಾರೆ.

ಕ್ರೀಡಾ ಕ್ಷೇತ್ರದಲ್ಲಿ ಹೆಗ್ಗಳ ಮತ್ತು ಬೇಟೋಳಿ ಗ್ರಾಮದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಶಿಕ್ಷಕ ಮಂಜುನಾಥ್ ಬೆಳಿಗ್ಗೆ 8.30ಕ್ಕೆ ಶಾಲೆಗೆ ಆಗಮಿಸಿ ಸಾಯಂಕಾಲ 6 ಗಂಟೆಯ ತನಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾರೆ. ರಜಾದಿನಗಳು, ಭಾನುವಾರಗಳಂದು ಶಾಲೆಗೆ ಆಗಮಿಸಿ ನಿಶ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ನೆರವಿನ ಹಸ್ತವನ್ನು ಚಾಚಿದ್ದಾರೆ. ಹೆಗ್ಗಳ ಶಾಲೆಯಲ್ಲಿ 11 ವರ್ಷಗಳ ಸೇವೆ ಸಲ್ಲಿಸಿದ ಇವರು ಇದೀಗ ತನ್ನ ಹುಟ್ಟೂರಿಗೆ ವರ್ಗವಾಗಿದ್ದಾರೆ. ರಾಜ್ಯ ರಾಷ್ಟ್ರಮಟ್ಟದಲ್ಲೂ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದಲ್ಲದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಸಾಧನೆಗೆ ಇವರ ಪ್ರೇರಣೆ ಅಪಾರವಾಗಿದೆ. ವಿದ್ಯಾರ್ಥಿಗಳ ಪೋಷಕರುಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಮೆಚ್ಚಿನ ಶಿಕ್ಷಕ ಮಂಜುನಾಥ್ ಒಟ್ಟಿನಲ್ಲಿ ಜನಾನುರಾಗಿ ದೈಹಿಕ ಶಿಕ್ಷಕರಾಗಿ ವರ್ಗಾವಣೆಗೊಂಡಿದ್ದಾರೆ.

- ರಜಿತ ಕಾರ್ಯಪ್ಪ