ಕೂಡಿಗೆ, ಡಿ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಎಲ್ಲಾ ವಾರ್ಡ್‍ಗಳನ್ನು ಶುಚಿತ್ವ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
14ನೇ ಹಣಕಾಸು ಯೋಜನೆಯ ಬಗ್ಗೆ ಹಾಗೂ ಕಾಮಗಾರಿಗಳನ್ನು ಕೈಗೊಳ್ಳಬೇಕಾಗುವ ಬಗ್ಗೆ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ನಿವೇಶನ ರಹಿತರಿಗೆ ನಿವೇಶನ ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚೆಗಳು ನಡೆದವು.
ಗ್ರಾ.ಪಂ.ಯಲ್ಲಿ ನಡೆಯುವ ಕೆಡಿಪಿ ಸಭೆಗೆ ಅಧಿಕಾರಿ ಬರದಿದ್ದರೆ ಕೆಡಿಪಿ ಸಭೆಯನ್ನು ಬಹಿಷ್ಕರಿಸಲು ಸರ್ವ ಸದಸ್ಯರು ತೀರ್ಮಾನಿಸಿದರು. ಕೆಡಿಪಿ ಸಭೆಯು ಮೂರು ತಿಂಗಳಿಗೊಮ್ಮೆ ನಡೆಯುವದರಿಂದ ಆಯಾ ವ್ಯಾಪ್ತಿಯ ಮಾಹಿತಿಗಳನ್ನು ನೀಡುವದು ಪ್ರಮುಖ ಉದ್ದೇಶವಾಗಿರುತ್ತದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಕೆಡಿಪಿ ಸಭೆಯನ್ನು ಬಹಿಷ್ಕರಿಸಲಾಗುವದು ಎಂದು ತಿಳಿಸಿದರು.
ಅಧ್ಯಕ್ಷೆ ಭವ್ಯ ಮಾತನಾಡಿ, ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಆಲಿಸಲಾಗಿದೆ. ಅವುಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲು ಸದಸ್ಯರು ಸಹಕಾರ ನೀಡಬೇಕು ಎಂದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಉದ್ಯೋಗ ಖಾತರಿ ಯೋಜನೆ ಮತ್ತು ವಿವಿಧ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು. ಸಭೆಗೆ ಬಂದ ಅರ್ಜಿಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು.
ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್, ಸದಸ್ಯರಾದ ಕುಮಾರಸ್ವಾಮಿ, ಪಾರ್ವತಿ, ಸಂತೋಷ್, ಶಿವಾನಂದ, ಸುಚಿತ್ರ, ರಾಧ, ಜ್ಯೋತಿ, ವೇದಾವತಿ, ಸುರೇಶ್, ರುದ್ರಾಂಬೆ, ಅರುಣಚಂದ್ರ, ವಿಶ್ವನಾಥ್, ಸರಸ್ವತಿ, ಸುಭೇದಾ, ಅಬ್ದುಲ್ ಖಾದರ್, ಗಣೇಶ್, ಜಯಲಕ್ಷ್ಮಿ, ಹರೀಶ್, ಜಗದೀಶ್, ಕಮಲ, ರುಕ್ಯಾ ಇದ್ದರು.