ಸುಂಟಿಕೊಪ್ಪ, ನ. 30: ಸುಂಟಿಕೊಪ್ಪದ ಹೃದಯ ಭಾಗದಲ್ಲಿ ರುವ ಇತಿಹಾಸ ಪ್ರಸಿದ್ಧವಾದ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಶತಮಾನದ ಹಿಂದೆ ಸುಂಟಿ ಕೊಪ್ಪದಲ್ಲಿ ಹಿರಿಯರ ಆಶಯದಂತೆ ಸಣ್ಣ ಪ್ರಮಾಣದಲ್ಲಿ ಗ್ರಾಮದೇವತೆ ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವರ ಗುಡಿ ಸ್ಥಾಪನೆಯಾಯಿತು. ಊರಿನ ಜನರು ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯವನ್ನು ನಡೆಸುತ್ತಾ ವಾರ್ಷಿಕ ಪೂಜಾ ಜಾತ್ರ್ಯೋತ್ಸವವನ್ನು ನೆರವೇರಿಸುತ್ತಾ ದೇವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ದೇವಾಲಯದ ಐತಿಹ್ಯ ನಡೆದ ಬಂದ ದಾರಿ: 1930 ರ ಅಸುಪಾಸಿನಲ್ಲಿ ಸುಂಟಿಕೊಪ್ಪದ ಪನ್ಯ ಎಂಬ ಸ್ಥಳದಲ್ಲಿ ಶ್ರೀ ಮುತ್ತಪ್ಪ ದೇವರ ಸಣ್ಣ ಗುಡಿಯಿದ್ದು ಅದನ್ನು ಗ್ರಾಮಸ್ಥರು ಗುರುತಿಸಿ ಪ್ರತಿ ವರ್ಷ ದೇವರ ಕೋಲ ಮುತ್ತಪ್ಪ ತಿರುಪತಿ ಉಪದೈವಗಳ ಕೋಲ ನಡೆಸುತ್ತಾ ಬರುತ್ತಿದ್ದರು ಎನ್ನಲಾಗಿದೆ.

ಆನಂತರ ಸ್ಥಳೀಯರಾದ ಮಲಬಾರ್ ಕುಂಞರಾಮನ್, ನಾರಾಯಣ ಆಚಾರಿ, ರಾಘವ ಆಯ್ಯರ್, ಅಣ್ಣಪ್ಪ ಪೂಜಾರಿ, ತಂಬಿ ಆಚಾರಿ, ವೆಳ್ಳಿಯಪ್ಪ ಚೆಟ್ಟಿಯಾರ್ ಇವರುಗಳು ತೀರ್ಮಾನ ಕೈಗೊಂಡು ಈಗಿನ ಚಾಮುಂಡಿ ಬನದಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಪಕ್ಕದಲ್ಲಿ ಶ್ರೀ ಮುತ್ತಪ್ಪ ದೇವಾಲಯವನ್ನು ಕಟ್ಟಿಸಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಅಂದಿನ ಕೊಡಗು ಜಿಲ್ಲಾಧಿಕಾರಿಯಾಗಿದ್ದ (1985) ಸಿದ್ಧಯ್ಯ ಪುರಾಣಿಕ್ ಅವರಿಂದ ದೇವಾಲಯದ ಉದ್ಘಾಟನೆ ನೇರವೇರಿಸಿದರೆಂದು ಹಿರಿಯರು ನೆನಪಿನ ಬುತ್ತಿಯನ್ನು ಬಿಚ್ಚಿಟಿದ್ದಾರೆ.

ಕುಂದಿರ ಶಕ್ತಿ: ಶ್ರೀ ಚಾಮುಂಡೇಶ್ವರಿ ಹಾಗೂ ಶ್ರೀ ಮುತ್ತಪ್ಪ ದೇವಾಲಯಕ್ಕೆ ಹಿಂದಿನ ಕಾಲದಲ್ಲಿ ಶ್ರೀ ಶಾಂತಗೇರಿ ತೋಟದಲ್ಲಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯದಿಂದ ಪ್ರತಿ ದಿನ ನಾಗರಹಾವು ಬಂದು ಚಾಮುಂಡೇಶ್ವರಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿ ಹಿಂತೆರಳುತ್ತಿದ್ದುದಾಗಿ ಹಿರಿಯರ ಅಂಬೋಣ. 2014ನೇ ಇಸವಿಯವರೆಗೆ ಈ ಎರಡೂ ದೇವಾಲಯದಲ್ಲಿ ನಿತ್ಯ ಪೂಜೆ ವಾರ್ಷಿಕ ಜಾತ್ರೋತ್ಸವ, ಕೋಲವನ್ನು ವಿಜೃಂಭಣೆಯಿಂದ ದೇವಾಲಯದ ಆಡಳಿತ ಮಂಡಳಿಯವರು ನಡೆಸಿಕೊಂಡು ಬರುತ್ತಿದ್ದರು. ಆನಂತರ ದೇವಾಲಯ ಟ್ರಸ್ಟ್‍ನವರು ದೇವಾಲಯವನ್ನು ಕೆಡವಿ ನೂತನ ದೇವಾಲಯ ವಿಗ್ರಹ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಿದ ಮೇರೆಗೆ ತಂತ್ರಿಗಳಿಂದ ಅಷ್ಟಮಂಗಲ ಪ್ರಶ್ನೆ ಇಡಲಾದಾಗ ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸನ್ನಿಧಿಯಲ್ಲಿ ಹಲವು ದೋಷಗಳು ಇದ್ದಿದ್ದು ಕಂಡು ಬಂತು. ಅದರಿಂದ ಊರಿನ ಸಮಸ್ತ ಜನರಿಗೆ ಕೃಷಿ ವ್ಯಾಪಾರ ವಿವಿಧ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ಆರೋಗ್ಯದಲ್ಲೂ ಏರುಪೇರಾಗುತ್ತಿದೆ. ಇದನ್ನು ಸರಿಪಡಿಸಿದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ, ವಿಗ್ರಹ ಪುನರ್ ಪ್ರತಿಷ್ಠಾಪನೆ ಅಗತ್ಯವೆಂದು ಕಂಡು ಬಂದಿದ್ದರಿಂದ ದೇವಾಲಯವನ್ನು ರೂ. 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಮುಗಿದಿದೆ. ಕಾರ್ಕಳದ ಶಿಲ್ಪಿ ರೋಹಿತ್ ತಂಡದವರು ದೇವಾಲಯವನ್ನು ಸುಂದರ ವಿನ್ಯಾಸದಲ್ಲಿ ಕೆತ್ತಿ ನಿರ್ಮಿಸುತ್ತಿದ್ದಾರೆ. ಇನ್ನಷ್ಟು ಧನ ಸಹಾಯದ ಅಗತ್ಯತೆಯಿದ್ದು, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ ಭಕ್ತಾದಿಗಳ ನೆರವು ಕೋರಿದ್ದಾರೆ.

ದಾನಿಗಳು ಶ್ರೀಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯ ಜೀರ್ಣೋದ್ಧಾರ ಸಮಿತಿ, ಕರ್ನಾಟಕ ಬ್ಯಾಂಕ್ ಸುಂಟಿಕೊಪ್ಪ ಶಾಖೆ ಖಾತೆ ಸಂಖ್ಯೆ 7112500102492001 ಐಎಫ್‍ಎಸ್‍ಸಿ ಕೋಡ್ ನಂ ಕೆಎಆರ್‍ಬಿ0000711 ಕಳುಹಿಸಬಹುದು ಎಂದು ಪದಾಧಿಕಾರಿಗಳು ಕೋರಿದ್ದಾರೆ.

- ಬಿ.ಡಿ. ರಾಜು ರೈ