ಗೋಣಿಕೊಪ್ಪಲು, ನ. 30: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲೆಯಲ್ಲಿ ರೈತರ ಪರ ಹೋರಾಟ ನಡೆಸುತ್ತಿರುವ ಹಿನ್ನೆಲೆ ಜಿಲ್ಲೆಯ ಉದ್ದಾಗಲಕ್ಕೂ ಅಭೂತ ಪೂರ್ವ ಬೆಂಬಲ ಲಭ್ಯವಾಗುತ್ತಿದ್ದು, ರೈತರು ರೈತ ಸಂಘದೊಂದಿಗೆ ಕೈ ಜೋಡಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಕರೆ ನೀಡಿದರು.

ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ರೈತ ಸಂಘದ ವತಿಯಿಂದ ನಡೆದ ರೈತ ಸಂವಾದ ಹಾಗೂ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಜಿಲ್ಲೆಯಲ್ಲಿ ರೈತ ಸಂಘದಿಂದ ಹೋರಾಟ ನಡೆಸಿ ರೈತರಿಗೆ ನ್ಯಾಯ ಒದಗಿಸಿದ ವಿವರವನ್ನು ಮುಂದಿಟ್ಟರು. ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಟಿ. ಶೆಟ್ಟಿಗೇರಿಯ ಹಿರಿಯ ರೈತ ಮುಖಂಡರುಗಳಾದ ಅಪ್ಪಚಂಗಡ ಮೋಟಯ್ಯ, ಬಿರುನಾಣಿ ಗ್ರಾಮದ ಕರ್ತಮಾಡ ಸುಜು, ಸಭೆಯಲ್ಲಿ ರೈತ ಸಂಘದ ಹೋರಾಟದ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚೆಟ್ಟಂಗಡ ಕಂಬ ಕಾರ್ಯಪ್ಪ ಸೇರಿದಂತೆ ರೈತ ಮುಖಂಡರುಗಳಾದ ತೀತರಮಾಡ ರಾಜ, ಕುಪ್ಪಣಮಾಡ ಪ್ರೀತಮ್, ಅಣ್ಣಳಮಾಡ ರಾಬಿನ್, ಕರ್ತಮಾಡ ರತನ್ ಚಂಗಪ್ಪ, ಮಲ್ಲೆಂಗಡ ಶಶಿ,ಸಮ್ಮಿ, ಕವಿತಾ, ಮಧು, ಅಣ್ಣಾಳಮಾಡ ಮಂಜು, ಹರೀಶ್, ಕುಪ್ಪಣಮಾಡ ಗೌತಮ್, ಮೀದೇರಿರ ಕವಿತಾ, ಕಾಯಪಂಡ ಮಧು, ಸ್ಟಾಲಿನ್, ಬಲ್ಯಮೀದೇರಿರ ಕೇಶು ಮುಂತಾದವರು ಹಾಜರಿದ್ದರು. ರೈತ ಸಂಘದ ಶ್ರೀಮಂಗಲ ಹೋಬಳಿ ಸಂಚಾಲಕ ಕಂಬ ಕಾರ್ಯಪ್ಪ ಸ್ವಾಗತಿಸಿದರು, ಹುದಿಕೇರಿ ಸಂಚಾಲಕ ಚಂಗುಲಂಡ ಸೂರಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುತ್ತಮುತ್ತಲ ಗ್ರಾಮದ ರೈತರು ನೂತನವಾಗಿ ರೈತ ಸಂಘಕ್ಕೆ ಸೇರ್ಪಡೆಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.