ನಾಪೋಕ್ಲು: ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ತಾ. 2 ರಂದು ಆಶ್ಲೇಷ ಬಲಿ ಪೂಜೆ ಮತ್ತು ವಿಶೇಷ ಪೂಜೆಗಳು ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

ಸೋಮವಾರಪೇಟೆ: ತಾಲೂಕಿನ ಅರಶಿಣಗುಪ್ಪೆ ಸಿದ್ದಲಿಂಗಪುರದಲ್ಲಿ ತಾ. 1 ರಂದು ಮಾಸಿಕ ಪಂಚಮಿ ಪೂಜೆ ಮತ್ತು ತಾ. 2 ರಂದು ವಾರ್ಷಿಕ ಷಷ್ಠಿ ಪೂಜೋತ್ಸವ ಆಯೋಜಿಸಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ತಾ. 1 ರಂದು ಶ್ರೀ ಮಂಜುನಾಥ ಸ್ವಾಮಿ ಮತ್ತು ನವನಾಗ ಸನ್ನಿಧಿಯಲ್ಲಿ ಮಾಸಿಕ ಪಂಚಮಿ ಪೂಜೆ ಬೆಳಿಗ್ಗೆ 9 ರಿಂದ ಪ್ರಾರಂಭಗೊಳ್ಳಲಿದ್ದು, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಲಿದೆ. ತಾ. 2 ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ನವನಾಗ ಸನ್ನಿಧಿಯಲ್ಲಿ ವಾರ್ಷಿಕ ಷಷ್ಠಿ ಪೂಜೋತ್ಸವಕ್ಕೆ ಚಾಲನೆ ದೊರೆಯಲಿದ್ದು, ನಂತರ ಅಲಂಕಾರ, ಅಭಿಷೇಕ, ತಂಬಿಲ ಪೂಜೆ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು, 11.30ಕ್ಕೆ ಮಹಾಮಂಗಳಾರತಿ ನೆರವೇರಲಿವೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ನೆಲಜಿ: ತಾ. 2 ರಂದು ಪೂರ್ವಾಹ್ನ 11 ಗಂಟೆಗೆ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ನೆಲಜಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ನಾಗಪೂಜೆ ಹಾಗೂ ಸಾಮೂಹಿಕ ಆಶ್ಲೇಷ ಬಲಿ ನಡೆಸಲಾಗುವದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಪೊನ್ನಂಪೇಟೆ: ಸಮೀಪದ ಹರಿಹರದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತೀವರ್ಷ ನಡೆಯುವ ಸುಬ್ರಹ್ಮಣ್ಯ ಷಷ್ಠಿ ತಾ. 2 ಹಾಗೂ 3 ರಂದು ನಡೆಯಲಿದೆ. ಎರಡು ದಿನಗಳ ಕಾಲ ಜರುಗುವ ಈ ಸುಬ್ರಹ್ಮಣ್ಯ ಷಷ್ಠಿಯಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.