ಮಡಿಕೇರಿ, ನ. 29: ಸೇನಾ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ಕೊಡಗು ಜಿಲ್ಲೆಯ ಸೇನಾ ಪರಂಪರೆಗೆ ಇದೀಗ ಮತ್ತೊಂದು ಗರಿ ಮೂಡಿದೆ. ದೇಶದ ರಕ್ಷಣಾ ಪಡೆಗೆ ಜನರಲ್‍ಗಳು ಲೆಫ್ಟಿನೆಂಟ್ ಜನರಲ್‍ಗಳು, ಮೇಜರ್ ಜನರಲ್‍ಗಳು, ಏರ್ ಮಾರ್ಷಲ್ಸ್ ಈ ರೀತಿಯಾಗಿ ಹಲವಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವದರೊಂದಿಗೆ ‘ಲ್ಯಾಂಡ್ ಆಫ್ ಜನರಲ್ಸ್’ ಎಂದು ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯಿಂದ ಇದೀಗ ಮತ್ತೊಬ್ಬ ಅಧಿಕಾರಿ ಉನ್ನತ ಪದವಿಗೆ ಏರಿದ್ದಾರೆ.ಪ್ರಸ್ತುತ ಮೇಜರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಬಿಟ್ಟಂಗಾಲ ನಾಂಗಾಲದವರಾದ ಚೆನ್ನೀರ ಬನ್ಸಿ ಪೊನ್ನಪ್ಪ (ಎ.ವಿ.ಎಸ್.ಎಂ.) ಅವರು ಇದೀಗ ಪದೋನ್ನತಿ ಹೊಂದಿದ್ದು, ಲೆಫ್ಟಿನೆಂಟ್ ಜನರಲ್ ಆಗಿ ನಿಯುಕ್ತಿಗೊಂಡಿದ್ದಾರೆ. ಇದರೊಂದಿಗೆ ಪ್ರಸ್ತುತ ಭಾರತೀಯ

(ಮೊದಲ ಪುಟದಿಂದ) ಸೇನೆಯಲ್ಲಿ ಒಂದೇ ಜಿಲ್ಲೆಯವರಾದ ಕೇವಲ ಒಂದೇ ಸಮುದಾಯಕ್ಕೆ ಸೇರಿರುವ ಮೂವರು ಅಧಿಕಾರಿಗಳು ಲೆಫ್ಟಿನೆಂಟ್ ಜನರಲ್‍ಗಳಾಗಿ ಕರ್ತವ್ಯದಲ್ಲಿರುವದು ವಿಶೇಷವಾಗಿದೆ.

ಇದೀಗ ಬಡ್ತಿ ಪಡೆದಿರುವ ಚೆನ್ನೀರ ಬನ್ಸಿ ಪೊನ್ನಪ್ಪ ಅವರೊಂದಿಗೆ, ಆರ್ಮಿ ಕಮಾಂಡರ್ ಆಗಿ ಲೆಫ್ಟಿನೆಂಟ್ ಜನರಲ್ ಪಟ್ಟಚೆರವಂಡ ಸಿ. ತಿಮ್ಮಯ್ಯ, ಮಿಲಿಟರಿ ಸೆಕ್ರೆಟರಿ ಟು ಪ್ರೆಸಿಡೆಂಟ್ ಆಫ್ ಇಂಡಿಯಾ ಹುದ್ದೆಯಲ್ಲಿ ಲೆಫ್ಟಿನೆಂಟ್ ಜನರಲ್ ಕೋದಂಡ ಪಿ. ಕಾರ್ಯಪ್ಪ ಅವರು ಸೇನಾ ಕರ್ತವ್ಯದಲ್ಲಿ ಇರುವ ಅಧಿಕಾರಿಗಳಾಗಿದ್ದಾರೆ.

ಕೊಡಗು ಜಿಲ್ಲೆಯಿಂದ ಈ ಹಿಂದೆ ಪೂರ್ಣ ಪ್ರಮಾಣದ ಜನರಲ್ (ಅತ್ಯುನ್ನತ ಹುದ್ದೆ)ಗಳಾಗಿ ಫೀ.ಮಾ. ಕೊಡಂದೆರ ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಅವರುಗಳು ಕರ್ತವ್ಯ ನಿರ್ವಹಿಸಿರುವದು ಇತಿಹಾಸವಾದರೆ ನಂತರದ ಹುದ್ದೆಯಾದ ಲೆಫ್ಟಿನೆಂಟ್ ಜನರಲ್‍ಗಳಾಗಿ ಅಪ್ಪಾರಂಡ ಅಯ್ಯಪ್ಪ, ಕೋದಂಡ ಎನ್. ಸೋಮಣ್ಣ, ಬಿದ್ದಂಡ ಸಿ. ನಂದಾ, ಬುಟ್ಟಿಯಂಡ ಕೆ. ಬೋಪಣ್ಣ, ಬಲ್ಲಚಂಡ ಕೆ. ಚಂಗಪ್ಪ ಹಾಗೂ ವೈದ್ಯಕೀಯ ವಿಭಾಗದಲ್ಲಿ ಡಾ. ಮಹಾವೀರ ಪ್ರಸಾದ್ ಕರ್ತವ್ಯ ನಿರ್ವಹಿಸಿದ್ದರು.

ಪ್ರಸ್ತುತ ಕರ್ತವ್ಯದಲ್ಲಿರುವ ಮೂವರು ಅಧಿಕಾರಿಗಳು ಸೇರಿದಂತೆ ಕೊಡಗು ಜಿಲ್ಲೆಯ ಒಟ್ಟು 11 ಮಂದಿ ದೇಶದ ರಕ್ಷಣಾ ಪಡೆಯ ಉನ್ನತ ಹುದ್ದೆ ಅಲಂಕರಿಸಿದಂತಾಗಿದೆ. ಇದರೊಂದಿಗೆ ಸುಮಾರು 20 ಮೇಜರ್ ಜನರಲ್‍ಗಳು, ನಾಲ್ವರು ಏರ್ ಮಾರ್ಷಲ್‍ಗಳು, ಕೊಡಗಿನ ಅಧಿಕಾರಿಗಳಾಗಿದ್ದಾರೆ.

ಪ್ರಸ್ತುತ ನೌಕಾ ಪಡೆಯಲ್ಲಿ ಉನ್ನತ ಹುದ್ದೆಯಲ್ಲಿ (ರಿಯರ್ ಅಡ್ಮಿರಲ್) ಐಚೆಟ್ಟಿರ ಉತ್ತಯ್ಯ ಅವರು ಕರ್ತವ್ಯದಲ್ಲಿದ್ದಾರೆ. ಈ ಮೂಲಕ ಕೊಡಗು ಜಿಲ್ಲೆ ರಕ್ಷಣಾ ಪಡೆಯಲ್ಲಿ ‘ಲ್ಯಾಂಡ್ ಆಫ್ ಜನರಲ್ಸ್’ ಎಂದೇ ಗುರುತಿಸಲ್ಪಟ್ಟಿರುವದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. -ಶಶಿ