ಗೋಣಿಕೊಪ್ಪಲು, ನ.29: ಕೊಡಗಿನಲ್ಲಿ ನಿರಂತರವಾಗಿ ಆನೆ ಮಾನವ ಸಂಘರ್ಷದಿಂದ ಮಾನವನ ಜೀವ ಹಾನಿ ಸೇರಿದಂತೆ ರೈತರ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರ ಸಭೆಯು ದ.ಕೊಡಗಿನ ಬಾಳೆಲೆ ಕೊಡವ ಸಮಾಜದಲ್ಲಿ ನಡೆಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೊಡವ ಸಮಾಜದ ಅಧ್ಯಕ್ಷರಾದ ಮಲ್ಚಿರ ಬೋಸ್ ಚಿಟ್ಟಿಯ್ಯಪ್ಪ ಗಿಡಕ್ಕೆ ನೀರು ಹಾಕುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಸಭೆಯಲ್ಲಿ ದ.ಕೊಡಗಿನ ವಿವಿಧ ಭಾಗದ ರೈತ ಮುಖಂಡರಾದ ನಲ್ಲೂರಿನ ಪುಚ್ಚಿಮಾಡ ಅಶೋಕ್, ತಿತಿಮತಿಯ ಚಪ್ಪುಡಿರ ಕಾರ್ಯಪ್ಪ, ಸಿದ್ದಾಪುರದ ವಕೀಲ ಹೇಮಚಂದ್ರ, ಬಾಳೆಲೆಯ ಅಳಮೇಂಗಡ ಬೋಸ್, ಕಾಡ್ಯಮಾಡ ಉದಯ್, ಮಾಜಿ ಜಿ.ಪಂ.ಸದಸ್ಯರಾದ ಅರಮಣಮಾಡ ರಂಜನ್ ಚಂಗಪ್ಪ, ತಿತಿಮತಿ ಚಪ್ಪುಡಿರ ರಾಮಕೃಷ್ಣ, ಟಿ.ಶೆಟ್ಟಿಗೇರಿಯ ಅಪ್ಪಚಂಗಡ, ಮೋಟಯ್ಯ,ಚಕ್ಕೆರ ಮಿನ್ನು ಬೆಳ್ಳಿಯಪ್ಪ, ಮಾಜಿ ಎಂ.ಎಲ್.ಸಿ.ಅರುಣ್ ಬೆಳೆಗಾರರ ಸಂಘದ ಅಧ್ಯಕ್ಷ ಕೈಬುಲ್ಲಿರ ಹರೀಶ್, ಮಾಚಯ್ಯ, ಆನೆ,ಮಾನವ ಸಂಘರ್ಷದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಬೆರೆತು ಹಂತ, ಹಂತವಾಗಿ ಸಭೆಗಳನ್ನು ನಡೆಸುವ ಮೂಲಕ ರೈತರಿಗೆ ಆಗುವ ಸಾವು, ನೋವು, ಬೆಳೆಗಳಿಗೆ ಪರಿಹಾರ ವಿಚಾರದಲ್ಲಿ ಚರ್ಚೆ ನಡೆಸಿ ಆ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು, ಕಾಡಾನೆಗಳು ಹಲಸಿನ, ಮಾವಿನ ಹಣ್ಣಿನ ಸಂದರ್ಭದಲ್ಲಿ ಹೆಚ್ಚಾಗಿ ತೋಟಗಳಿಗೆ ಲಗ್ಗೆ ಇಡುತ್ತಿರುವದರಿಂದ ತೋಟದ ಬೆಳೆಗಳು ನಷ್ಟವಾಗುತ್ತಿದೆ.

ಇಂತಹ ಮರಗಳನ್ನು ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಕ್ರಮವಹಿಸಬೇಕು,

(ಮೊದಲ ಪುಟದಿಂದ) ರೈತರ ತೋಟದಲ್ಲಿ ಬೆಳೆಸಿರುವ ಹಲಸು, ಮಾವು ಮರಗಳನ್ನು ಕಡಿಯಲು ರೈತರಿಗೆ ಅವಕಾಶ ನೀಡಬೇಕು, ಕಾಡುಹಂದಿ ರೈತರ ತೋಟದಲ್ಲಿ ನುಗ್ಗಿ ನಷ್ಟ ಮಾಡುತ್ತಿದೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕು, ಇದರೊಂದಿಗೆ ಮಂಗಗಳು ಕೂಡ ತೋಟಕ್ಕೆ ಲಗ್ಗೆ ಇಡುತ್ತಿವೆ ಇದರ ಬಗ್ಗೆ ಗಮನ ಹರಿಸಬೇಕು, ಕಾಡಂಚಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ಹೆಚ್ಚಾಗಬೇಕು. ತಿತಿಮತಿ ಭಾಗದಲ್ಲಿ ಅಳವಡಿಸಿರುವ ರೈಲ್ವೆ ಬ್ಯಾರಿ ಕೇಡ್ ಕಳಪೆ ಮಟ್ಟದಿಂದ ಕೂಡಿದ ಬಗ್ಗೆ ತನಿಖೆ ನಡೆಸಬೇಕು, ಇದೀಗ ಕಾಫಿ ತೋಟಗಳಿಗೆ ಕಾಡುಕೋಣ ಹೆಚ್ಚಾಗಿ ಲಗ್ಗೆ ಇಡುತ್ತಿದೆ ಎಂಬ ವಿಷಯಗಳ ಬಗ್ಗೆ ಸಭೆಯ ಗಮನ ಸೆಳೆದರು.

ನಿರ್ಣಯ : ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದ ಬಳಿಕ ಕಳೆದ ಎರಡು ತಿಂಗಳ ಹಿಂದೆ ಪೊನ್ನಪ್ಪ ಸಂತೆಯಲ್ಲಿ ಕಾಡು ಹಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಕುಟುಂಬದೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ನಡೆದುಕೊಂಡ ರೀತಿಯನ್ನು ಖಂಡಿಸಲಾಯಿತು. ರೈತರ ಮೇಲೆ ಕಾನೂನು ಬಾಹಿರವಾಗಿ ನಡೆದುಕೊಂಡು, ರೈತರ ಮೇಲೆ ಹಲ್ಲೆ, ಹಣ, ಮೊಬೈಲ್ ದೋಚಿ ಕಿರುಕುಳ ನೀಡಿದ ಅರಣ್ಯ ಸಿಬ್ಬಂದಿ ಮೇಲೆ ಪೊಲೀಸ್ ಮೊಕದ್ದಮೆ ದಾಖಲಾಗಬೇಕು,ಇವರನ್ನು ಅಮಾನತ್ತಿಡಲು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಿಎಫ್‍ಒ ಪ್ರಭಾಕರನ್, ಸಿಸಿಎಫ್, ನಾರಾಯಣ ಸ್ವಾಮಿ, ಸಿಸಿಎಫ್ ಹಿರಿಲಾಲ್, ಡಿಎಫ್‍ಒ ಕ್ರಿಸ್ತರಾಜ್, ಮಡಿಕೇರಿ ಡಿಎಫ್‍ಒ ಕವಿಯಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಜಿ ಇಟ್ಟಿರ ಸಬಿತ, ತಾಲೂಕು ಸಂಚಾಲಕ ಬಾಜಮಾಡ ಭವಿಕುಮಾರ್, ವಿವಿಧ ಹೋಬಳಿಯ ಸಂಚಾಲಕರಾದ ಆಲೆಮಾಡ ಮಂಜುನಾಥ್, ಚಂಗುಲಂಡ ಸೂರಜ್, ಚಟ್ಟಂಗಡ ಕಂಬ ಕಾರ್ಯಪ್ಪ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎನ್.ಪ್ರಥ್ಯು ಪಿ.ಅರ್.ಪಂಕಜ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಪೋಡಮಾಡ ಸುಕೇಶ್, ಕೆ.ಬಿ.ಮಹೇಶ್ ಕುಮಾರ್, ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯರಾದ ಪವನ್ ಚಿಟ್ಟಿಯಪ್ಪ ಸೇರಿದಂತೆ ರೈತ ಸಂಘದ ಪ್ರಮುಖರಾದ ಮಲ್ಚಿರ ಅಶೋಕ್, ಗಿರೀಶ್, ಪುಚ್ಚಿಮಾಡ ಸುನೀಲ್, ತಿತರಮಾಡ ರಾಜ, ಬಾಳೆಲೆ ಹೋಬಳಿ ಸಂಚಾಲಕ ಮೇಚಂಡ ಕಿಶ ಮಾಚಯ್ಯ, ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳಾದ ಎಸಿಎಪ್ ರೋಹಿಣಿ, ಡಿ.ಎಸ್.ದಯಾನಂದ, ಎಸ್.ಅರ್.ಪ್ರಸನ್ನ ಕುಮಾರ್, ಎಸಿಎಫ್ ಸಿಂದು ನಿಶ,ಪೌಲ್ ಅಂತೋಣಿ, ಶ್ರೀಪತಿ, ಅರ್‍ಎಫ್‍ಒ ಕೆ.ಪಿ.ಗೋಪಾಲ್, ಎಂ.ಕೇಶವ್, ಬೀರೆಂದ್ರ, ಗಿರೀಶ್ ಜಾಗಲೆ, ಅಶೋಕ್ ಹುನಗುಂದ, ಶಿವಾನಂದ ನಿಂಗಾಣಿ, ತೀರ್ಥ, ಗೋಣಿಕೊಪ್ಪ ಸಿಪಿಐ.ರಾಮರೆಡ್ಡಿ, ಕುಟ್ಟ ಸಿಪಿಐ ಪರಶಿವಮೂರ್ತಿ, ಗೋಣಿಕೊಪ್ಪ ಎಸ್.ಐ.ಸುರೇಶ್ ಬೋಪಣ್ಣ,ಪೊನ್ನಂಪೇಟೆ ಎಸ್‍ಐ ಕುಮಾರ್, ಶ್ರೀಮಂಗಲ ಎಸ್‍ಐ ಎಂ.ದಿನೇಶ್‍ಕುಮಾರ್ ಮುಂತಾದವರು ಭಾಗವಹಿಸಿದ್ದರು.

48 ಕಿ.ಮೀ.ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ - ಹರಿಲಾಲ್

ಕೊಡಗು - ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಹರಿಲಾಲ್, ರೈತರ ಪ್ರಶ್ನೆಗಳಿಗೆ ಉತ್ತರಿಸಿ, ಆನೆ ಧಾಳಿಯಿಂದ ಮಾನವ ಮೃತ ಪಟ್ಟಲ್ಲಿ ಸರ್ಕಾರದ ವತಿಯಿಂದ ಪರಿಹಾರವನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೇರಿಕೆ ಮಾಡಲಾಗಿದ್ದು; ಸರಕಾರದÀ ಅಧಿಕೃತ ಆದೇಶಕ್ಕೆ ಎದುರು ನೋಡುತಿದ್ದೇವೆ. ಹುಲಿ, ಚಿರತೆಯಿಂದ ಜಾನುವಾರುಗಳು ಸಾವನ್ನಪ್ಪಿದ ಸಂದರ್ಭದಲ್ಲಿ 10 ಸಾವಿರ ನೀಡುತ್ತಿದ್ದೇವು ಇದೀಗ 20 ಸಾವಿರಕ್ಕೆ ಹೆಚ್ಚಿಸಲು ಸರಕಾರದ ಮುಂದೆ ಕಡತ ಇಡಲಾಗಿದೆ ಸದ್ಯದಲ್ಲೇ ಇದನ್ನು ಮಂಜೂರಾತಿ ಸಿಗಲಿದೆ ಎಂದರು. ವನ್ಯಜೀವಿ ವಿಭಾಗ ಹಾಗೂ ಸಾಮಾಜಿಕ ಅರಣ್ಯದಲ್ಲಿ ವ್ಯತ್ಯಾಸ ಇರುವ ಬಗ್ಗೆ ಹಲವಾರು ದೂರುಗಳಿವೆ. ಈ ಬಗ್ಗೆ ಬೌಂಡರಿ ಫಿಕ್ಸ್ ಮಾಡಲು ಕ್ರಮ ಕೈಗೊಂಡಿರುವ ಬಗ್ಗೆ ನಕ್ಷೆ ಸಹಿತ ವಿವರಣೆ ನೀಡಿದರು.ಇದರಿಂದ ವನ್ಯಜೀವಿಯಿಂದ ಅನಾಹುತ ಸಂದರ್ಭದಲ್ಲಿ ಪರಿಹಾರ ಕೊಡಲು ಅನುಕೂಲವಾಗುತ್ತದೆ. ಸ್ಥಳೀಯ ರೈತ ಸಂಘದ ಪದಾಧಿಕಾರಿಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಾಟ್ಸ್ಯಾಪ್ ಗ್ರೂಪ್‍ಗೆ ಸೇರಿಸಿ ನಿರಂತರವಾಗಿ ರೈತರೊಂದಿಗೆ ಸಂಪರ್ಕ ಹೊಂದಲಾಗುವದು. ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ರೈತರೊಂದಿಗೆ ಅನಾವಶ್ಯಕ ಸಂಘರ್ಷ ಮಾಡಿದರೆ,ಕೂಡಲೇ ಸ್ಪಂದಿಸುವ ಕೆಲಸ ಮಾಡುವಲ್ಲಿ ಹಿಂದೇಟು ಹಾಕಿದರೆ ಅಂತವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ 48 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲು 50 ಕೋಟಿ ಅನುದಾನ ಲಭ್ಯವಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ಎಚ್ಚರಿಕೆ ವಹಿಸಲಾಗುವದು ಎರಡು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತ ಸಂಘ ಮುಖಂಡರೊಂದಿಗೆ ಸಭೆ ನಡೆಸುತ್ತೇವೆ.

ಕಾಡುಹಂದಿ ವಿಚಾರದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ಅಧಿಕಾರಿಗಳು ರೈತರೊಂದಿಗೆ ನಡೆದು ಕೊಂಡ ರೀತಿಯ ಬಗ್ಗೆ ಕ್ಷಮೆ ಯಾಚಿಸಿದ ಅವರು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು, ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಾ.ತಹಶೀಲ್ದಾರ್ ಮಹೇಶ್, ತಾ.ವೈದ್ಯಾಧಿಕಾರಿ ಡಾ.ಯತಿರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು.ಕೆ.ಗಿರಿಜನ ಕಲ್ಯಾಣಧಿಕಾರಿ ಡಿ.ಜೆ.ಗುರುಶಾಂತಪ್ಪ, ಡಿಡಿಪಿಐ ಮಚ್ಚಾಡೋ, ಬಿ.ಇ.ಒ.ಶ್ರೀಶೈಲ, ಇಇ ಇಬ್ರಾಹಿಂ, ಎಇಇ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

-ಚಿತ್ರ, ವರದಿ: ಹೆಚ್.ಕೆ.ಜಗದೀಶ್