ಮಡಿಕೇರಿ, ನ. 29: ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಶಿಕ್ಷಣ, ಆರೋಗ್ಯ, ಉದ್ಯೋಗ, ಕ್ರೀಡೆ ಹೀಗೆ ಹಲವು ಕ್ಷೇತ್ರಗಳಲ್ಲಿ ಇತರರಿಗೆ ಸರಿಸಮನಾಗಿ ಯಶಸ್ಸು ಗಳಿಸಿ ಉನ್ನತ ಸ್ಥಾನ ಪಡೆಯುತ್ತಿರುವದು ಉತ್ತಮ ಬೆಳವಣಿಗೆ ಎಂದು ಜಿ.ಪಂ.ಅಧ್ಯಕ್ಷ ಬಿ.ಎ. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯ ಸ್ತ್ರೀಶಕ್ತಿ ಗುಂಪುಗಳ ಸದಸ್ಯರುಗಳಿಗೆ ನಗರದ ಶಿಶುಕಲ್ಯಾಣ ಸಂಸ್ಥೆಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತ ನಾಡಿದರು. ಸ್ತ್ರೀಶಕ್ತಿ ಗುಂಪುಗಳು ಉತ್ತಮ ಕಾರ್ಯ ಚಟುವಟಿಕೆಗಳನ್ನು ನಡೆಸು ತ್ತಿದ್ದು, ಇನ್ನಷ್ಟು ಯಶಸ್ಸು ಹಾಗೂ ಆರ್ಥಿಕ ಸದೃಢತೆ ಹೊಂದಬೇಕು ಎಂದು ಹಾರೈಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನಿಸ ಅವರು ಮಾತನಾಡಿ, (ಮೊದಲ ಪುಟದಿಂದ) ಇಂದಿನ ಕಾರ್ಯಕ್ರಮವೂ ಸ್ತ್ರೀಶಕ್ತಿ ಗುಂಪುಗಳಿಗೆ ನೀಡಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಇನ್ನೂ ಹೆಚ್ಚಿನ ಯಶಸ್ಸುಗಳಿಸಲು ಸಹಕಾರಿ ಯಾಗಿದೆ. ಎಂದು ತಿಳಿಸಿದರು.

ಸ್ತ್ರೀಶಕ್ತಿ ಗುಂಪುಗಳು ಕೆಲವೊಂದು ಸಂದರ್ಭದಲ್ಲಿ ಸಾಲ ಪಡೆದು ಮರುಪಾವತಿ ಮಾಡದೆ ಸಂಘದ ಇತರ ಸದಸ್ಯರಿಗೆ ತೊಂದರೆ ಉಂಟಾಗುತ್ತಿದ್ದು, ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಮಾತನಾಡಿ, ದೇಶ ಕಟ್ಟಲು ಮಹಿಳೆಯರ ಪಾತ್ರ ಬಹು ಮುಖ್ಯ ವಾದದ್ದು. ಸ್ತ್ರೀಶಕ್ತಿ ಗುಂಪುಗಳಿಂದ ಕುಟುಂಬಗಳು ಆರ್ಥಿಕವಾಗಿ ಸಬಲೀಕರಣ ಹೊಂದುತ್ತಿವೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆÀ ಸವಿತಾ ರೈ ಮಾತನಾಡಿ, ಹೆಣ್ಣಿನಲ್ಲಿ ಅಗಾಧ ಶಕ್ತಿ ಇದೆ ಎಂದು ತೋರಿಸಿಕೊಟ್ಟ ಒನಕೆ ಓಬವ್ವರಂತಹ ಸ್ತ್ರೀಯರು ತೊಟ್ಟಿಲು ತೂಗಿದ ಕೈ ಜಗತ್ತನ್ನು ಮುನ್ನಡೆಸಬಲ್ಲದು ಎಂಬದನ್ನು ತೋರಿಸಿದ್ದಾರೆ ಎಂದು ನೆನಪಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವದೇ ದೇಶದ ಅಭಿವೃದ್ಧಿಯಲ್ಲಿ ಮಹಿಳಾ ಸಬಲೀಕರಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪದ ಸೂರ್ಯ ಸ್ತ್ರೀಶಕ್ತಿ ಗುಂಪು ಹಾಗೂ ವೀರಾಜಪೇಟೆ ಸಾಯಿ ಶಂಕರ್ ಸ್ತ್ರೀಶಕ್ತಿ ಗುಂಪುಗಳ ಉತ್ತಮ ಕಾರ್ಯ ಚಟುವಟಿಕೆಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಸ್ತ್ರೀಶಕ್ತಿ ಗುಂಪುಗಳು ತಯಾರಿಸಿದ ವಸ್ತುಗಳ ಮಾರಾಟ ಮೇಳವು ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಳಿಗೆಯನ್ನು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಉದ್ಘಾಟಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭ, ಜಿಲ್ಲಾ ಸ್ತ್ರೀಶಕ್ತಿ ಗುಂಪುಗಳ ಅಧ್ಯಕ್ಷೆ ರೆಹನಾ, ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷರು ಇತರರು ಇದ್ದರು.