ಸೋಮವಾರಪೇಟೆ, ನ. 28: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಕಾಫಿ ತೋಟದಲ್ಲಿದ್ದ ಬೀಟೆ ಮರಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯಾಧಿಕಾರಿಗಳು, ಓರ್ವನನ್ನು ಬಂಧಿಸಿ, ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಯಡವಾರೆ ಗ್ರಾಮದ ಭರತ್ ಎಂಬವರ ಕಾಫಿ ತೋಟದಲ್ಲಿದ್ದ 2 ಬೀಟೆ ಮರಗಳನ್ನು ಕಡಿದು, ಕೆಲ ನಾಟಾ ಸಾಗಾಟಗೊಳಿಸಲಾಗಿತ್ತು. ಉಳಿದ ನಾಟಾಗಳನ್ನು ಸಾಗಾಟ ಗೊಳಿಸುವ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಧಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಆರೋಪಿ, ಐಗೂರು ಗ್ರಾಮದ ಪ್ರಕಾಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಅರಣ್ಯಾಧಿಕಾರಿಗಳ ಧಾಳಿ ಸಂದರ್ಭ ಉಳಿದ ಆರೋಪಿಗಳಾದ ಭರತ್, ವಿಶ್ವ, ಮಂಜು, ಕವನ್ ಎಂಬವರುಗಳು ಸ್ಥಳದಿಂದ ಪರಾರಿಯಾಗಿದ್ದು, ಸಾಗಾಟಕ್ಕೆ ಸಿದ್ಧಪಡಿಸಲಾಗಿದ್ದ ಸುಮಾರು 2 ರಿಂದ 3 ಲಕ್ಷ ಮೌಲ್ಯದ ಬೀಟೆ ಮರದ ನಾಟಾಗಳನ್ನು ವಶಕ್ಕೆ ತೆಗೆದುಕೊಂಡು, ಒಟ್ಟು ಐವರ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ.ಬಂದಿತ ಆರೋಪಿ ಪ್ರಕಾಶ್‍ನನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವಲಯ ಅರಣ್ಯಾಧಿಕಾರಿ ಶಮಾ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಯತೀಶ್, ಅರಣ್ಯ ವೀಕ್ಷಕರುಗಳಾದ ಪ್ರಸಾದ್, ವೀರಪ್ಪ, ಮಂಜುನಾಥ್ ಮತ್ತು ವಿನೋದ್ ಅವರುಗಳು ಭಾಗವಹಿಸಿದ್ದರು.