ಸೋಮವಾರಪೇಟೆ, ನ. 28: ಕಳೆದ 4 ವರ್ಷಗಳ ಹಿಂದೆ ಗುಂಪಿನಲ್ಲಿ ಸಂಚರಿಸುತ್ತಿದ್ದ ಗಜರಾಜ, ಇಂದು ಒಬ್ಬಂಟಿಯಾಗಿ ಗಡಿಯಲ್ಲಿ ಎರಡು ದಿನಕ್ಕೊಮ್ಮೆ ಗಸ್ತು ತಿರುಗುತ್ತಿದ್ದು, ಸ್ಥಳೀಯ ನಿವಾಸಿಗಳು ಭಯದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.ಜಿಲ್ಲೆಯ ಗಡಿ, ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ಒಂಟಿ ಸಲಗವೊಂದು ಎರಡು ದಿನಕ್ಕೊಮ್ಮೆ ಪ್ರತ್ಯಕ್ಷಗೊಳ್ಳುತ್ತಿದ್ದು, ತನಗೆ ಬೇಕಾದಷ್ಟು ಆಹಾರ ತಿಂದು ನಂತರ ಅರಣ್ಯಕ್ಕೆ ಸೇರುತ್ತಿದೆ.

ಮುಖ್ಯ ರಸ್ತೆಯಲ್ಲಿಯೇ ಗಜಸಂಚಾರ ಇರುವದರಿಂದ ಸ್ಥಳೀಯರು ಭಯಭೀತರಾಗಿದ್ದು, ರಸ್ತೆಯಲ್ಲಿ ಸಂಚರಿಸಲೂ ಹಿಂದೇಟು ಹಾಕುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಆನೆಯೇ ಇದೀಗ ಒಂಟಿಯಾಗಿ ಸಂಚರಿಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಕಳೆದ 4 ವರ್ಷಗಳ ಹಿಂದೆ ಸುಮಾರು 12 ಕಾಡಾನೆಗಳಿದ್ದ ಹಿಂಡೊಂದು ಕೊಡ್ಲಿಪೇಟೆ ಹೋಬಳಿಯ ಉಂಬಳಿ ಬೆಟ್ಟದಿಂದ ಮನುಗನಹಳ್ಳಿ, ಬಸವನಹಾರೆ, ಕೋಣಿಗನಹಳ್ಳಿ, ಕಟ್ಟೆಪುರ, ನಿಲುವಾಗಿಲು ಬಾಲತ್ರಿಪುರ ಸುಂದರಿ ದೇವಾಲಯ ಮಾರ್ಗದ ಮೂಲಕ ಆಗಳಿ ಅರಣ್ಯಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದವು.

ನಂತರದ ದಿನಗಳಲ್ಲಿ ಈ ಆನೆಗಳು ಕಂಡುಬಂದಿರಲಿಲ್ಲ. ಇದೀಗ ಒಂಟಿ ಆನೆಯೊಂದು ಇದೇ ಮಾರ್ಗದಲ್ಲಿ 2 ದಿನಕ್ಕೊಮ್ಮೆ ಸಂಚರಿಸುತ್ತಿದ್ದು, ಈ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ತಾನು ಸಂಚರಿಸುವ ಮಾರ್ಗಕ್ಕೆ ಗೇಟ್ ಮೂಲಕ ತಡೆಯೊಡ್ಡಿದ್ದರೂ ಅದನ್ನು ತೆಗೆದು ಇದೇ ಮಾರ್ಗದಲ್ಲಿ ಸಂಚರಿಸುತ್ತಿದೆ. ಈ ಮಾರ್ಗ ಬಿಟ್ಟು 50 ಮೀಟರ್ ಆಚೆ-ಈಚೆ ಹೋಗುತ್ತಿಲ್ಲ. ಇದನ್ನು ಗಮನಿಸಿದರೆ ಕಳೆದ 4 ವರ್ಷದ ಹಿಂದಿನ ಆನೆಯೇ ಇರಬೇಕು ಎಂದು ಸ್ಥಳೀಯ ನಿವಾಸಿಗಳು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ.

ಗಜ ಸಂಚಾರದಿಂದ ಜನತೆ ಭಯಭೀತರಾಗಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಓಡಾಡಬೇಕಿದೆ. ಈವರೆಗೆ ಈ ಒಂಟಿ ಸಲಗ ಯಾರಿಗೂ ತೊಂದರೆ ಕೊಡದೇ ತನಗೆ ಬೇಕಾದಷ್ಟು ಆಹಾರ ತಿಂದು ನಂತರ ಅರಣ್ಯ ಸೇರುತ್ತಿರುವದೇ ಪುಣ್ಯ! ಎಂದು ಸ್ಥಳೀಯರಾದ ಗಣೇಶ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ಗುಂಪಿನಿಂದ ಮುಂದುವರೆದ ದಾಂಧಲೆ: ಈ ಮಧ್ಯೆ ಕೊಡ್ಲಿಪೇಟೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸುಮಾರು 25ಕ್ಕೂ ಅಧಿಕ ಕಾಡಾನೆಗಳು ಪ್ರತ್ಯೇಕವಾಗಿ

(ಮೊದಲ ಪುಟದಿಂದ) ಸಂಚರಿಸುತ್ತಿದ್ದು, ಈ ಹಿಂಡಿನಿಂದ ಭಾರೀ ಪ್ರಮಾಣದಲ್ಲಿ ಕೃಷಿ ಫಸಲು ನಷ್ಟವಾಗುತ್ತಿದೆ.

ಅಗಳಿ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಜನನಿಬಿಡ ಪ್ರದೇಶದಲ್ಲಿಯೇ ಓಡಾಡುತ್ತಿವೆ. ಕಳೆದ ವಾರವಷ್ಟೇ ಕಟ್ಟೆಪುರದ ಸಂತೋಷ್ ಅವರಿಗೆ ಸೇರಿದ ತೋಟದೊಳಗೆ ನುಗ್ಗಿರುವ ಆನೆಗಳ ಹಿಂಡು ತೋಟದ ಬೇಲಿಯನ್ನು ನಾಶಪಡಿಸಿವೆ.

ಕಟ್ಟೆಪುರ, ಕೋಣಿಗನಹಳ್ಳಿ, ನಿಲುವಾಗಿಲು ಭಾಗದಲ್ಲಿ ಸುಮಾರು 25ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿದ್ದು, ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಸಂಗ್ರಹ ಅಧಿಕವಿರುವದು ಮತ್ತು ಗದ್ದೆಗಳಲ್ಲಿ ಭತ್ತದ ಫಸಲು ಇರುವ ಹಿನ್ನೆಲೆ ಆನೆಗಳು ಒಳಪ್ರವೇಶಿಸದಂತೆ ತಡೆಯೊಡ್ಡಿರುವದರಿಂದ ಕಾಡಾನೆಗಳು ಆಚೆ ಬದಿ ತೆರಳಲಾಗದೇ ತೋಟ ಸೇರಿದಂತೆ ಜನವಸತಿ ವ್ಯಾಪ್ತಿಯಲ್ಲಿಯೇ ಸಂಚರಿಸುತ್ತಿವೆ.

ಈ ಆನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಕೃಷಿಕರ ಕೃಷಿ ಫಸಲನ್ನು ಕಾಪಾಡಬೇಕೆಂದು ಆಗ್ರಹಿಸಿ ಕೊಡ್ಲಿಪೇಟೆ ಮತ್ತು ನೆರೆಯ ಮಲ್ಲಿಪಟ್ಟಣ ವ್ಯಾಪ್ತಿಯ ಕೃಷಿಕರು ಇಂದು ಮಲ್ಲಿಪಟ್ಟಣ ಬಂದ್ ನಡೆಸಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಯಲ್ಲಿ ಉಂಟಾಗಿರುವ ಕಾಡಾನೆ ಸಮಸ್ಯೆಯಿಂದ ಗಡಿ ಭಾಗದ ಜನರನ್ನು ಪಾರುಮಾಡುವಂತೆ ಒತ್ತಾಯಿಸಿ, ರಸ್ತೆ ತಡೆ-ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಎರಡೂ ಜಿಲ್ಲೆಗಳ ಅರಣ್ಯಾಧಿಕಾರಿಗಳು ಭೇಟಿ ನೀಡಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮವಹಿಸುವ ಭರವಸೆ ನೀಡಿದ್ದಾರೆ.